ಬೆಳಗಾವಿ : ಬೆಳಗಾವಿ ಜಿಲ್ಲೆಯ ಸುಮಾರು ಮೂರು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಪರಿವರ್ತನೆ ಮಾಡುವುದರೊಂದಿಗೆ ಬೆಳಗಾವಿ – ಬಾಗಲಕೋಟೆ ಜಿಲ್ಲೆಯಡಿ ಹಾಯ್ದು ಹೋಗುವ ಚತುಷ್ಪಥ ರಸ್ತೆಯನ್ನು ಸಹ ಸುಧಾರಣೆ ಮಾಡುವ ಕುರಿತು ಅಂದಾಜು ರೂ: 1775 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡುವ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಇಂದು ನವ ದೆಹಲಿಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಅವರ ನೂತನ ಸಂಸದ ಭವನ ಕಚೇರಿಯಲ್ಲಿ ಭೇಟಿ ಮಾಡಿ ವಿನಂತಿಸಿದರು.
1 ) ಜಾಂಬೋಟಿ – ರಬಕವಿ (ರಾ.ಹೆ : 54), 2) ರಾಯಚೂರು – ಬಾಚಿ (ರಾ.ಹೆ : 20) ರಸ್ತೆ ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ (ಚಾ : 348.30 ದಿಂದ 355.18 ಬೆಳಗಾವಿ ತಾಲೂಕು) ಹಾಗೂ 3) ಸುಮಾರು 60 ಕಿ.ಮಿ ಉದ್ದದ ಸಂಕೇಶ್ವರ – ಹುಕ್ಕೇರಿ – ಘಟಪ್ರಭಾ – ಗೋಕಾಕ – ಮನೋಳ್ಳಿ – ಸವದತ್ತಿ – ಧಾರವಾಡ ಚತುಷ್ಪಥ ರಸ್ತೆಯ ಸುಧರಣೆ ಮತ್ತು ಮೇಲ್ದರ್ಜೆಗೆ ಏರಿಸುವ ಕುರಿತು ಹೀಗೆ ಅಂದಾಜು ಒಟ್ಟು ರೂ: 1775 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ತಯಾರಿಸಲಾಗಿದೆ. ಇದನ್ನು ಅನುಮೋದಿಸಿದಲ್ಲಿ ಪ್ರಸ್ತಾಪಿತ ರಸ್ತೆಗಳಲ್ಲಿ ವಾಹನ ದಟ್ಟಣೆಯೊಂದಿಗೆ ಅಪಘಾತ ಸಂಖ್ಯೆಯೂ ಸಹ ಗಣನೀಯವಾಗಿ ಇಳಿಮುಖವಾಗಲು ಸಹಕಾರಿಯಾಗಲಿದೆ ಎಂದು ಸಂಸದರು ಪ್ರಸ್ತಾಪಿಸಿದರು.
ಸಹಾನುಭೂತಿಯಿಂದ ವಿಷಯ ಅವಲೋಕಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಪ್ರಸ್ತಾಪಿತ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಶೀಘ್ರ ಅಗತ್ಯ ಅನುಮೋದನೆ ನೀಡುವ ವಿಚಾರ ತಿಳಿಸಿರುವುದಾಗಿ ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.