ಬೆಂಗಳೂರು:
ಇಂದು ಸರ್ಕಾರದ ಮೂರನೇ ಗ್ಯಾರಂಟಿ ಯೋಜನೆ ಆರಂಭಗೊಳ್ಳಲಿದ್ದು ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಲಿದೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಬಿಪಿಎಲ್ ಪಡಿತರದಾರರಿಗೆ 10ಕೆಜಿ ಅಕ್ಕಿ ಗ್ಯಾರಂಟಿ ಕಾಂಗ್ರೆಸ್ ಘೋಷಿಸಿತ್ತು. ಅದರಂತೆ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿ ಮಾಡಿದೆ. ಸದ್ಯಕ್ಕೆ ಐದು ಕೆಜಿ ಅಕ್ಕಿ ನೀಡಲಿದ್ದು, ಉಳಿದ 5 ಕೆ.ಜಿ ಅಕ್ಕಿ ಬದಲಿಗೆ 170 ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಡಿಬಿಟಿ ಮೂಲಕ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 170 ರೂ.ನಂತೆ ಹಣ, ಕುಟುಂಬದ ಮುಖ್ಯಸ್ಥನ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. ಈ ಗ್ಯಾರಂಟಿ ಯೋಜನೆಗೆ ಒಟ್ಟು 1,28,16,253 ಮಂದಿ ಫಲಾನುಭವಿಗಳಿದ್ದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ್ದರೆ ಮಾತ್ರವೇ ಹಣ ವರ್ಗಾವಣೆ ಆಗುವುದಾಗಿ ಹೇಳಲಾಗಿದೆ.
ಸದ್ಯ 1.2 ಕೋಟಿ ಮಂದಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್ ಮಾಡಿಸಿದ್ದು ಇನ್ನು ಉಳಿದ 22 ಲಕ್ಷ ಕಾರ್ಡ್ದಾರರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ ಬಳಿಕವೇ ಹಣ ವರ್ಗಾವಣೆ ನಡೆಯಲಿದೆ.