ಬೆಂಗಳೂರು : ಏ.1ರಿಂದ ಹೊಸ ವಿತ್ತೀಯ ವರ್ಷ ಆರಂಭವಾಗಲಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಹಾಕುವ ಕೆಲವು ಕ್ರಮಗಳು ಜಾರಿಗೆ ಬರಲಿವೆ. ಹಾಲು, ಮೊಸರು, ಟೋಲ್ ಶುಲ್ಕ, ಕಾರು ಸೇರಿ ಹಲವು ವಸ್ತು ದುಬಾರಿ ಆಗಲಿವೆ. ಆದರೆ ಇದೇ ವೇಳೆ ಆದಾಯ ತೆರಿಗೆ ವಿನಾಯ್ತಿ ಮಿತಿ ₹12 ಲಕ್ಷಕ್ಕೆ ಏರಿಕೆ, ಏಕೀಕೃತ ಪೆನ್ಷನ್ ವ್ಯವಸ್ಥೆ ಜಾರಿ, ಬ್ಯಾಂಕ್ ಎಫ್ಡಿ ಟಿಡಿಎಸ್ ಮಿತಿ ಹೆಚ್ಚಳ ಸೇರಿ ಕೆಲ ಸಮಾಧಾನದ ಕ್ರಮಗಳೂ ಜಾರಿಗೊಳ್ಳಲಿವೆ. ಇದು ಜನರಿಗೆ ಹೊಸ ಸಂವತ್ಸರದ ‘ಬೇವು-ಬೆಲ್ಲದ’ ಮಿಶ್ರಣ ಇದ್ದಂತೆ.
ಯಾವುದು ಹೆಚ್ಚಳ?
ಹಾಲು, ಮೊಸರು ದರ ₹4 ಏರಿಕೆ
ಹಾಲು-ಮೊಸರು ದರ ಪ್ರತಿ ಲೀಟರ್ಗೆ 4 ರು.ಗಳಷ್ಟು ಹೆಚ್ಚಳ. ನೀಲಿ ಪ್ಯಾಕೆಟ್ ದರ 42 ರು. ನಿಂದ 46 ರು.ಗೆ, 200 ಗ್ರಾಂ ಮೊಸರು 12ರಿಂದ 13 ರು.ಗೆ, 500 ಗ್ರಾಂ ಮೊಸರು 26 ರು.ನಿಂದ 28 ರು.ಗೆ, ಮಸಾಲ ಮಜ್ಜಿಗೆ 200 ಮಿ.ಲೀಗೆ 9 ರು.ನಿಂದ 10 ರು.ಗಳಿಗೆ ಏರಿಕೆ. ಇತರ ಕ್ಷೀರೋತ್ಪನ್ನಗಳ ದರಗಳೂ ಹೆಚ್ಚಳ.
ವಿದ್ಯುತ್ ದರ 26 ಪೈಸೆ ಏರಿಕೆ
ಏ.1ರಿಂದ ವಿದ್ಯುತ್ ದರ ಪ್ರತಿ ಯುನಿಟ್ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್ಗೆ 25 ರು. ಹೆಚ್ಚಳ. ವಾಣಿಜ್ಯ ಸಂಪರ್ಕದ ನಿಗದಿತ ಶುಲ್ಕ ಸಹ ಪ್ರತಿ ಕಿ.ವ್ಯಾಟ್ಗೆ 10 ರು. ಹೆಚ್ಚಳ. ಆದರೆ ಕೈಗಾರಿಕೆ/ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯೂನಿಟ್ಗೆ 64 ಪೈಸೆಯಿಂದ 1.75 ರು.ವರೆಗೆ ಕಡಿತ.
ಟೋಲ್ ಶುಲ್ಕ ಶೇ.5ರಷ್ಟು ಹೆಚ್ಚಳ
ಏ.1ರಿಂದ ಟೋಲ್ ಶುಲ್ಕ ಶೇ.3 ರಿಂದ 5 ರಷ್ಟು ಹೆಚ್ಚಳ. ರಾಜ್ಯದಲ್ಲಿರುವ ಮೈಸೂರು-ಬೆಂಗಳೂರು ರಸ್ತೆ, ಬೆಂಗಳೂರು-ತಿರುಪತಿ ರಸ್ತೆ, ಬೆಂಗಳೂರು-ಹೈದರಾಬಾದ್ ರಸ್ತೆ, ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ ಸೇರಿ ಎಲ್ಲ ಹೈವೇ ಟೋಲ್ ದರ ಶೇ.5ರಷ್ಟು ಏರಿಕೆ.
ಕಾರು, ವಾಣಿಜ್ಯ ವಾಹನ ದುಬಾರಿ
ರಾಜ್ಯದಲ್ಲಿ ಏ.1ರಿಂದ ಖರೀದಿಸುವ 25 ಲಕ್ಷ ರು. ಮೀರಿದ ವಿದ್ಯುತ್ಚಾಲಿತ ಕ್ಯಾಬ್ಗಳಿಗೂ ಶೇ. 10ರಷ್ಟು ತೆರಿಗೆ ಹಾಗೂ 10 ಲಕ್ಷ ರು.ವರೆಗಿನ ಕ್ಯಾಬ್ಗಳಿಗೂ ಶೇ. 5ರಷ್ಟು ತೆರಿಗೆ. ಉಳಿದಂತೆ ಮಾರುತಿ, ಟಾಟಾ, ಹ್ಯುಂಡೈ, ಮಹೀಂದ್ರಾ ಸೇರಿದಂತೆ ವಿವಿಧ ಕಾರುಗಳ ದರ ಶೇ.4ರಷ್ಟು ಏರಿಕೆ.
₹12 ಲಕ್ಷವರೆಗೆ ಆದಾಯ ತೆರಿಗೆ ಇಲ್ಲ
ಹೊಸ ಆದಾಯ ತೆರಿಗೆ ನೀತಿ ಏ.1ರಿಂದ ಜಾರಿಗೆ. ಇದರಿಂದ ವಾರ್ಷಿಕ 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಲಭಿಸಲಿದೆ, ಜೊತೆಗೆ 75 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿ ₹12. 75 ಲಕ್ಷವರೆಗೂ ವಿನಾಯ್ತಿ ಲಭ್ಯವಿರುತ್ತದೆ.
ಏಕೀಕೃತ ಪೆನ್ಷನ್ಯೋಜನೆ ಜಾರಿ
ಏಕೀಕೃತ ಪಿಂಚಣಿ ಯೋಜನೆ (ಯಪಿಎಸ್) ಏ.1ರಿಂದ ಜಾರಿಗೆ. ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿರುವ ಕೇಂದ್ರ ಸರ್ಕಾರಿ ನೌಕರರು, ನಿವೃತ್ತಿಯ ಬಳಿಕ ಕೊನೆಯ 12 ತಿಂಗಳ ಸಂಬಳದ ಸರಾಸರಿಯ ಶೇ.50ರಷ್ಟನ್ನು ಪಿಂಚಣಿ ರೂಪದಲ್ಲಿ ಪಡೆಯಲಿದ್ದಾರೆ.
ಬಳಕೆ ಆಗದ ಯುಪಿಐ ಐಡಿ ಸ್ತಬ್ಧ
ಗೂಗಲ್ ಪೇ, ಫೋನ್ ಪೇಗೆ ಬಳಸುವವರಿಗೆ ಇದು ಎಚ್ಚರಿಕೆ ಸುದ್ದಿ. ಯುಪಿಐ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೂ ಆ ಮೊಬೈಲ್ ಸಂಖ್ಯೆಯನ್ನು ದೀರ್ಘ ಸಮಯದ ಬಳಸದೇ ಇದ್ದಲ್ಲಿ ಬ್ಯಾಂಕ್ಗಳ ಕ್ರಮ. ಸಂಬಂಧಿತ ಬ್ಯಾಂಕ್ನಿಂದ ಆ ಮೊಬೈಲ್ ಸಂಖ್ಯೆಯ ಯುಪಿಐ ಖಾತೆ ನಿಷ್ಕ್ರಿಯ.
ಬ್ಯಾಂಕ್ ಕನಿಷ್ಠ
ಬ್ಯಾಲೆನ್ಸ್ ಏರಿಕೆಎಸ್ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನಡಾ ಮತ್ತು ಇತರ ಕೆಲವು ಬ್ಯಾಂಕ್ಗಳು ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿಯಲ್ಲಿ ಬದಲಾವಣೆ ಮಾಡಿವೆ. ಒಂದು ವೇಳೆ ಕನಿಷ್ಠ ಬ್ಯಾಲೆನ್ಸ್ ಇಡದಿದ್ದರೆ ಗ್ರಾಹಕರಿಗೆ ಬ್ಯಾಂಕ್ಗಳು ದಂಡ ವಿಧಿಸಲಿವೆ.
ಚೆಕ್ ಕ್ಲಿಯರೆನ್ಸ್
ವ್ಯವಸ್ಥೆ ಬದಲುಏ.1ರಿಂದ ಬ್ಯಾಂಕ್ಗಳಲ್ಲಿ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆ ಬದಲು. ಹೊಸ ನಿಯಮದ ಪ್ರಕಾರ 50,000 ರು.ಗಿಂತ ಹೆಚ್ಚಿನ ಚೆಕ್ ಪಾವತಿಗೆ ಖಾತೆದಾರರು ಬ್ಯಾಂಕ್ ಖಾತೆಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಚೆಕ್ ವಿವರ ನೀಡಬೇಕು. ಪಾವತಿಗೂ ಮುನ್ನ ಬ್ಯಾಂಕ್ ಅದನ್ನು ಪರಿಶೀಲಿಸಬೇಕು.
ಟಿಡಿಎಸ್ ಮಿತಿ ಹೆಚ್ಚಳ ಶುಭ ಸುದ್ದಿ
ಹಲವು ವಿಭಾಗಗಳಲ್ಲಿ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಮಿತಿ ಏರಿಕೆ. ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ (ಎಫ್ಡಿ) ಇಟ್ಟಿರುವ ಇದು ಸಣ್ಣ ತೆರಿಗೆದಾರರಿಗೆ ಇದರಿಂದ ರಿಲೀಫ್. ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಮಿತಿ 1 ಲಕ್ಷ ರು.ಗೆ ಏರಿಕೆ