ಬೆಳಗಾವಿ : ದಕ್ಷ ಸರಕಾರ ರಚನೆಯಲ್ಲಿ ಜನರ ಪಾತ್ರ ಪ್ರಮುಖವಾದದ್ದು, ಮತದಾನ ಹಕ್ಕು ಚಲಾಯಿಸುವ ಮೂಲಕ ನಮ್ಮ ಯೋಗ್ಯ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತೇವೆ. ಇಂತಹ ಪ್ರಮುಖ ಜವಾಬ್ದಾರಿ ನಿರ್ವಹಿಸುವಾಗ ಪ್ರತಿಯೊಬ್ಬರೂ ಮತದಾನ ಮಾಡಬೇಕಿರುವುದು ಆದ್ಯ ಕರ್ತವ್ಯವಾಗಿದೆ. ಇಂತಹ ಜವಾಬ್ದಾರಿಯುವ ಮತದಾರರಿಗೆ ಒಂದು ವಾರ ಉಚಿತ ಆರೋಗ್ಯ ತಪಾಸಣೆ ನಡೆಸಲು ನಗರದ ಶ್ರೀ ಆರ್ಥೋ & ಟ್ರಾಮಾ ಸೆಂಟರ್ ಮುಂದಾಗಿದೆ.
ಪ್ರಜಾಪ್ರಭುತ್ವದ ಹಬ್ಬವನ್ನು ಮತದಾನ ಮಾಡುವ ಮೂಲಕ ಆಚರಿಸುವ ನಾಗರಿಕರಿಗೆ ಆರ್ಥೋಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಉಚಿತವಾಗಿ ರೋಗ ತಪಾಸಣೆ ನಡೆಸಿ ಮತದಾನ ಮಹತ್ವ ತಿಳಿಸಿ ಉತ್ತೇಜಿಸುವ ಪ್ರಯತ್ನ ಇದಾಗಿದೆ.
ಮೇ 7 ರ ಮತದಾನ ದಿನದಂದು ಮತ ಚಲಾಯಿಸಿ ಬೆರಳ ಶಾಯಿ ಪ್ರದರ್ಶಿಸುವ ಮತದಾರರಿಗೆ ನಗರದ ಕಾಲೇಜು ರಸ್ತೆಯ, ಸನ್ಮಾನ ಹೊಟೇಲ್ ಹಿಂಭಾಗದ ಶ್ರೀ ಆರ್ಥೋ ಮತ್ತು ಟ್ರಾಮಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ವೈದ್ಯಕೀಯ ನಿರ್ದೇಶಕ ಡಾ. ಐ. ದೇವಗೌಡ ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣೆ ಜೊತೆಗೆ ಎಕ್ಸರೇ, ಬ್ಲಡ್ ಟೆಸ್ಟ್ ಮತ್ತಿತರ ಸೌಲಭ್ಯಗಳನ್ನು ಶೇ.25 ರಿಯಾಯಿತಿಯಲ್ಲಿ ಮಾಡಲಾಗುವುದು. ಚುನಾವಣಾ ಹಬ್ಬದಲ್ಲಿ ಮತದಾರರ ಜವಾಬ್ದಾರಿ ಮತ್ತು ಕರ್ತವ್ಯವನ್ನು ಹೆಚ್ಚಿಸಲು, ಮತದಾನದ ಶೇ. ಪ್ರಮಾಣ ಹೆಚ್ಚಾಗಬೇಕು ಎಂಬ ಸದುದ್ದೇಶದಿಂದ ಮತದಾನ ಮಾಡುವವರಿಗಾಗಿ ಈ ಶಿಬಿರ ಏರ್ಪಡಿಸಲಾಗಿದೆ. ಜನತೆ ಹೆಚ್ಚು ಮತದಾನ ಮಾಡಿ ಎಂದು ಡಾ. ಐ. ದೇವಗೌಡ ಕರೆ ನೀಡಿದ್ದಾರೆ.