ಜನಜೀವಾಳ ಜಾಲ, ಬೆಳಗಾವಿ :
ವಿದ್ಯಾರ್ಥಿಗಳು ಉತ್ತಮ ಜೀವನಶೈಲಿ ಅಳವಡಿಸಿಕೊಂಡು ಆರೋಗ್ಯದತ್ತ ಗರಿಷ್ಠ ಗಮನಹರಿಸಬೇಕು ಎಂದು ಕೆ.ಎಲ್ ಇ ಹಿರಿಯ ಚಿಕ್ಕ ಮಕ್ಕಳ ತಜ್ಞ ಡಾ. ವಿ.ಡಿ.ಪಾಟೀಲ ಹೇಳಿದರು.
ಶನಿವಾರ ನಗರದ ಕೆ ಎಲ್ ಇ ಸಂಸ್ಥೆಯ ಜಿಎ ಪದವಿ ಪೂರ್ವ ಸಂಯುಕ್ತ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗ್ರತಿ ಶಿಬಿರದಲ್ಲಿ ಅವರು ಮಾತನಾಡಿದರು.
ಎಲ್ಲರಲ್ಲೂ ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುತ್ತವೆ. ಅಂತಹ ಸಮಸ್ಯೆಗಳು ಕಂಡು ಬಂದ ತಕ್ಷಣ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಬೇಕು. ಆರೋಗ್ಯಪಾಲನೆಯಲ್ಲಿ ಪೋಷಕರು ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ದೇಶದ ಶಕ್ತಿಯಾಗಿದ್ದಾರೆ. ಆದ್ದರಿಂದ ಅವರು ಸದೃಢರಾಗಿರಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಇಂದು ಮಕ್ಕಳ ರೂಢಿಯೇ ಬದಲಾಗಿದೆ. ತಂದೆ-ತಾಯಿ ಅವರ ಜೀವನ ಶೈಲಿಯನ್ನು ಉತ್ತಮವಾಗಿಸಬೇಕು. ಮಕ್ಕಳು ಪ್ರತಿದಿನ ಒಂದು ಗಂಟೆ ಮೊಬೈಲ್, ಟಿವಿ ನೋಡಬಹುದು. ಆದರೆ, ಅದಕ್ಕಿಂತ ಹೆಚ್ಚು ಸಮಯ ಅವುಗಳನ್ನು ನೋಡುವುದು ಆರೋಗ್ಯ ದೃಷ್ಟಿಯಿಂದ ಒಳಿತಲ್ಲ. ಊಟ-ವ್ಯಾಯಾಮ ಉತ್ತಮವಾಗಿರಬೇಕು. ಪ್ರತಿ ವರ್ಷ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ರೀತಿಯ ಅರೋಗ್ಯ ತಪಾಸಣೆ ನಡೆಸಲಾಗುತ್ತದೆ. ಮಕ್ಕಳು ಇಂತಹ ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಆಜೀವ ಸದಸ್ಯೆ ಮತ್ತು ಕೆಎಲ್ ಇ ಸಂಸ್ಥೆಯ ಸಂಯೋಜಕಿ ಡಾ. ಪ್ರೀತಿ ದೊಡ್ಡವಾಡ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ದಂತ ಆರೋಗ್ಯ ಇಂದಿನ ಅತ್ಯಂತ ಅಗತ್ಯವಾಗಿದೆ. ಬದಲಾಗಿರುವ ಜೀವನ ಕ್ರಮದಿಂದ ದಂತ ಕೆಡುತ್ತಿದ್ದು ದಂತ ಆರೋಗ್ಯಕ್ಕೆ ಗರಿಷ್ಠ ಗಮನ ನೀಡಬೇಕು ಎಂದರು.
ಆಜೀವ ಸದಸ್ಯ ಡಾ. ಶಿವಯೋಗಿ ಹೂಗಾರ ಮಾತನಾಡಿ, ಇಂತಹ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದಾಗ ವಿದ್ಯಾರ್ಥಿಗಳು ಅದರ ಪೂರ್ಣ ಲಾಭ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಆರೋಗ್ಯ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಹೀಗಾಗಿ ಇಂದಿನ ದಿನಮಾನಗಳಲ್ಲಿ ಶೈಕ್ಷಣಿಕ ಚಟುವಟಿಕೆ ಜತೆಗೆ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ನೇತೃತಜ್ಞ ಡಾ. ಶಿವಾನಂದ ಬುಬನಾಳೆ ಅವರು ಮಕ್ಕಳ ನೇತ್ರ ತಪಾಸಣೆ ನಡೆಸಿ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯದೊಂದಿಗೆ ನೇತ್ರ ತಪಾಸಣೆ ಕಾಲಕಾಲಕ್ಕೆ ಅತ್ಯಗತ್ಯವಾಗಿದೆ. ನೇತ್ರದೋಷ ಕಂಡು ಬಂದಲ್ಲಿ ಪೋಷಕರು ತಕ್ಷಣ ತಜ್ಞ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಬೇಕು ಎಂದು ತಿಳಿಸಿದರು. ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದರು.
ಆಜೀವ ಸದಸ್ಯ ಮಹಾದೇವ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಚಾರ್ಯ ಸಿದ್ಧರಾಮ ಗದಗ ವಂದಿಸಿದರು. ಸುನಿಲ ಹಲವಾಯಿ ನಿರೂಪಿಸಿದರು.