ಬೆಂಗಳೂರು :
ವಿಧಾನಸಭೆ ಚುನಾವಣೆ ವೇಳೆ ಭರವಸೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜುಲೈ 1ರಂದು ಜಾರಿ ಮಾಡುವುದಾಗಿ ಈಗಾಗಲೇ ಪ್ರಕಟಿಸಿದೆ.
ಗೃಹಜ್ಯೋತಿ ಯೋಜನೆ ಕುರಿತು ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳಿದ್ದು ಈ ಕುರಿತಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಗೊಂದಲಗಳನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.
ರಾಜ್ಯದ 2.14 ಕೋಟಿ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಲಾಭ ದೊರೆಯಲಿದೆ. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ಯೋಜನೆ ಲಾಭ ಪಡೆಯಲು ಕರಾರುಪತ್ರ ಬೇಕು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಯೂನಿಟ್ ಗಿಂತ ಕಡಿಮೆ ಬಳಕೆದಾರರು ರಾಜ್ಯದಲ್ಲಿ 2.14 ಕೋಟಿ ಇದ್ದಾರೆ. ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸೇವಾಸಿಂಧು ಆ್ಯಪ್ ನಲ್ಲಿ ಜನ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ್ ಆರ್ .ಆರ್ ನಂಬರ್ ಗೆ ಲಿಂಕ್ ಆಗಿರಬೇಕು. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ದಿ ಪಡಿಸಲಾಗುತ್ತಿದೆ. ಸ್ವಂತ ಮನೆ ಅಥವಾ ಬಾಡಿಗೆ ಮನೆ ಇರಲಿ ಅರ್ಜಿ ಸಲ್ಲಿಸುವಾಗ ಕರಾರು ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಜೂನ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಜುಲೈನಿಂದಲೇ ಯೋಜನೆ ಲಾಭ ಸಿಗಲಿದೆ. ಜುಲೈ ಒಳಗೆ ಬಳಸಿರುವ ಕರೆಂಟ್ ಬಿಲ್ ಪಾವತಿಸಬೇಕು. ಮೊಬೈಲ್ ಆ್ಯಪ್ ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ಹೊಸದಾಗಿ ಮನೆ ಕಟ್ಟಿದವರಿಗೆ ಹಾಗೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಾಡಿಗೆ ಮನೆಯಲ್ಲಿರುವವರಿಗೆ ಈ ಯೋಜನೆ ಸದ್ಯಕ್ಕೆ ಜಾರಿಯಾಗುವುದಿಲ್ಲ. ಇದರ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಸ್ಪಷ್ಟತೆ ನೀಡಲಾಗುವುದು. ಬೇರೆ ರಾಜ್ಯಗಳಿಂದ ಬಂದು ಇಲ್ಲಿ ವಾಸ ಇರುವವರು ಆಧಾರ್ ಗುರುತಿನ ಚೀಟಿಯಲ್ಲಿ ಇಲ್ಲಿನ ವಿಳಾಸ ನಮೂದಿಸಿದ್ದರೆ ಈ ಯೋಜನೆಯ ಲಾಭ ಪಡೆಯಬಹುದು. ಇಲ್ಲವಾದಲ್ಲಿ ಕಡ್ಡಾಯವಾಗಿ ಕರಾರು ಪತ್ರ ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ವಿದ್ಯುತ್ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಚುನಾವಣೆ ಇದ್ದ ಕಾರಣ ಆದೇಶ ಜಾರಿಯಾಗಿರಲಿಲ್ಲ. ಚುನಾವಣೆ ಮುಗಿದ ಬೆನ್ನಲ್ಲೇ ಹೊಸ ದರ ಜಾರಿಗೆ ಬಂದಿದೆ ಎಂದು ಹೇಳಿದರು. ಬಡವರು ಬಿಲ್ ಕಟ್ಟುವುದೇ ಬೇಡ ಎಂದು ಗೃಹಜ್ಯೋತಿ ಯೋಜನೆಯನ್ನು ನಮ್ಮ ಸರ್ಕಾರ ಜಾರಿ ಮಾಡಿದೆ ಎಂದು ತಿಳಿಸಿದ್ದಾರೆ.