ಬೆಂಗಳೂರು :ರಾಜ್ಯದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿಯ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಇದೀಗ ನ್ಯಾಯಾಲಯದ ಕಟ್ಟೆ ಏರಿದೆ.
ಶಕ್ತಿ ಯೋಜನೆಯಿಂದ ನಾನಾ ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಕಾನೂನು ವಿದ್ಯಾರ್ಥಿಗಳ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಾಶಿಕಾ ಸರವಣ ಸಲ್ಲಿಸಿದ್ದ ಪಿಐಎಲ್ ನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಳೆ ನೇತೃತ್ವದ ವಿಭಾಗಿಯ ನ್ಯಾಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ವಾದ ಆಲಿಸಿದ ನಂತರ ಪ್ರತಿಕ್ರಿಯಿಸಿದ ನ್ಯಾಯ ಪೀಠವು ಶಕ್ತಿ ಯೋಜನೆ ಜಾರಿಯಾದ ನಂತರ ಬಸ್ ಗಳಲ್ಲಿ ದಟ್ಟಣೆ ಉಂಟಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಯೋಜನೆ ಜಾರಿಯಾಗುವ ಮೊದಲು ಬಸ್ ಗಳಲ್ಲಿ ಪ್ರಯಾಣಿಕರ ದಟ್ಟಣೆ ಇರಲಿಲ್ಲವೇ ? ಯೋಜನೆಯಿಂದಾಗಿಯೇ ಬಸ್ಸುಗಳಲ್ಲಿ ದಟ್ಟಣೆ ಉಂಟಾಗಿದೆಯೇ ? ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ. ಸರಕಾರಿ ಬಸ್ಸುಗಳಲ್ಲಿ ಇಷ್ಟೇ ಜನರು ಇರಬೇಕೆಂಬ ನಿಯಮ ಇದೆಯೇ ? ಯೋಜನೆ ಜಾರಿಯ ಮೊದಲು ಸಂಚಾರ ಸುಗಮವಾಗಿತ್ತೆ ಎಂದು ಪ್ರಶ್ನಿಸಿದೆ.
ಸೂಕ್ತ ಅಧ್ಯಯನ ನಡೆಸಿದ ನಂತರ ಅಗತ್ಯ ದಾಖಲೆ ಮತ್ತು ಸಿದ್ಧತೆಗಳೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿರುವ ನ್ಯಾಯ ಪೀಠ ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿ ಆದೇಶಿಸಿದೆ.
ಶಕ್ತಿ ಯೋಜನೆಯಿಂದ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಕರ ದಟದಟಣೆ ಹೆಚ್ಚಾಗಿ ಹಿರಿಯ ನಾಗರಿಕರು, ಶಾಲಾ ಮಕ್ಕಳು, ಬಸ್ ಗಳಲ್ಲಿ ಹತ್ತಲು ಆಗುತ್ತಿಲ್ಲ. ನಿಗದಿತ ಸಮಯಕ್ಕೆ ಶಾಲಾ ಕಾಲೇಜು ತಲುಪಲು ಆಗುತ್ತಿಲ್ಲ. ಬಸ್ ಗಳಲ್ಲಿ ಸೀಟು ಪಡೆಯಲು ಗಲಾಟೆ, ಹೊಡೆದಾಟ ನಡೆದಿದೆ. ಉಚಿತ ಪ್ರಯಾಣದಿಂದ ವಾರಕ್ಕೆ 100 ಕೋಟಿ ಹಣ ಸರಕಾರಕ್ಕೆ ನಷ್ಟವಾಗುತ್ತಿದೆ. ಯೋಜನೆಯಿಂದ ವಾರ್ಷಿಕ ಅಂದಾಜು 3200 ರಿಂದ 3400 ಕೋಟಿ ವೆಚ್ಚವಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.