ಕಳ್ಳ ಪೊಲೀಸ್ ಸಾಗರ ಜಾಧವ ಸಹ ಭಾಗಿ
ಬೆಳಗಾವಿ: ₹500ನೋಟುಗಳನ್ನು ಕೊಟ್ಟರೆ ಅದರ ದುಪ್ಪಟ್ಟು ಹಣ ₹2000ಮುಖಬೆಲೆಯ ನೋಟುಗಳನ್ನು ಕೊಡುವುದಾಗಿ ವಂಚಿಸಿದ್ದ ತಂಡವನ್ನು ಬೆಳಗಾವಿ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಲ್ಲಿ ಮಿರಜ್ ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ಸಾಗರ ಸದಾಶಿವ ಜಾಧವ ಸಹ ಇರುವುದು ಕಳವಳಕಾರಿ.
ಸಾಂಗಲಿ ತಾಸಗಾಂವ ನಿವಾಸಿ ಸಮೀರ ಭಾನುದಾಸ ಭೋಸಲೆ ಎಂಬುವವರು ಕಾಗವಾಡ ಠಾಣೆಗೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ‘ಕಳ್ಳ ಪೊಲೀಸ್ ಸಾಗರ ಜಾಧವ’ ಸಹ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
ಮೇ. 31ರ ರಾತ್ರಿ 8ಕ್ಕೆ ದೂರುದಾರರಾದ ಸಮೀರ ಅವರಿಗೆ ಆಗುಂತಕರು ಫೋನ್ ಮಾಡಿ ₹500ಮುಖಬೆಲೆಯ 5ಲಕ್ಷ ಹಣ ತಂದು ಕೊಟ್ಟರೆ, ₹2000ಮುಖಬೆಲೆಯ 6ಲಕ್ಷ ಕೊಡುವುದಾಗಿ ನಂಬಿಸಿ, ಹಣ ಪಡೆದು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಪರಾರಿಯಾದ ಬಗ್ಗೆ ದೂರು ನೀಡಿದ್ದರು.
ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಈಗ ನಾಲ್ವರ ಪೈಕಿ ಮೂವರು ಸೆರೆ ಸಿಕ್ಕಿದ್ದು, ಕಾಗವಾಡ ಪೊಲೀಸರು ನೆರೆಯ ಮಹಾರಾಷ್ಟ್ರದಲ್ಲಿ ಜಾಲಾಡಿ ಮೂವರನ್ನು ಬಂಧಿಸಿದ್ದಾರೆ.
ಎಸ್ಪಿ ಮನವಿ:
₹2000ಮುಖಬೆಲೆಯ ನೋಟುಗಳನ್ನು ಹೊಂದಿದ್ದವರು ನೇರವಾಗಿ ಬ್ಯಾಂಕಗಳಿಗೆ ಹೋಗಿ ಕೊಟ್ಟು, ಬೇರೆ ಹಣ ಪಡೆಯಲು ಕಾನೂನಾತ್ಮಕವಾಗಿ ಅವಕಾಶ ಇದೆ. ಎರಡು ಸಾವಿರ ನೋಟು ಹೊಂದಿದವರು ಅಳುಕಿಲ್ಲದೇ ಬ್ಯಾಂಕಿಗೆ ಹೋಗಿ ಕೊಡಿ. ನೋಟು ಬದಲಾವಣೆ ಮಾಡಿಕೊಡುವುದಾಗಿ ಹೇಳುವ ವಂಚಕರಿಗೆ ಬಲಿಯಾಗಬೇಡಿ ಎಂದು ಡಾ. ಸಂಜೀವ ಪಾಟೀಲ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.