ರಾಯಚೂರು: ನರಹರಿ ಆರಾಧನೆಗೆ ಹೊರಟ್ಟ ವಿದ್ಯಾರ್ಥಿಗಳ ಕ್ರೂಶರ್ ವಾಹನ ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿ, 10 ಜನರಿಗೆ ಗಾಯಗಳಾದ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಇವರೆಲ್ಲರೂ ಮಂತ್ರಾಲಯದಿಂದ ಹಂಪಿಯ ನರಹರಿ ಆರಾಧನೆ ಹೊರಟಿದ್ದರು ಎಂದು ತಿಳಿದು ಬಂದಿದೆ. ದುರ್ಘಟನೆಯಲ್ಲಿ ಮಂತ್ರಾಲಯ ಸಂಸ್ಕೃತ ಪಾಠ ಶಾಲೆಯ ಮೂರು ವಿದ್ಯಾರ್ಥಿಗಳು ಸೇರಿ ವಾಹನ ಚಾಲಕ ಕೂಡ ಮೃತಪಟ್ಟಿದ್ದಾರೆ. ಮೃತರನ್ನ ಅಯ್ಯವಂದನ್ ( 18), ಸುಜೇಂದ್ರ( 22), ಅಭಿಲಾಷ (20) ಹಾಗೂ ವಾಹನ ಚಾಲಕ ಶಿವಾ(24) ಎಂದು ಗುರುತಿಸಲಾಗಿದೆ.
ಗಾಯಗೊಂಡ 10 ಜನರನ್ನ ರಾಯಚೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿಂಧನೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯೇ ಮೃತದೇಹ ಪೋಸ್ಟ್ ಮಾರ್ಟಮ್ ಮುಗಿಸಿ ಶವಗಳನ್ನ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 14 ಜನ ಪ್ರಯಾಣಿಸುತ್ತಿದ್ದ ಕ್ರೂಶರ್ ವಾಹನದ ಆಕ್ಸಲ್ ಕಟ್ ಆಗಿ ಮೂರು ಬಾರಿ ಪಲ್ಟಿ ಹೊಡೆದಿದೆ. ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ಬೃಂದಾವನಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಪೊಲೀಸ್ ಅಧಿಕಾರಿಗಳು ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮಂತ್ರಾಲಯ ಶ್ರೀಗಳು ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.