ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮುತ್ಸಂದ್ರ ಗ್ರಾಮದ ಸಮೀಪದ ಬಾಡಿಗೆ ಮನೆಯಲ್ಲಿದ್ದ ಅಸ್ಸಾಂನ ನಾಲ್ವರು ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಉಸಿರುಗಟ್ಟಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಜಯಂತ್ ಸಿಂಧೆ, ನಿರೇಂದ್ರನಾಥ್, ಡಾಕ್ಟರ್ ಟೈಡ್ ಮತ್ತು ಧನಂಜಯ ಟೈಡ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20ರ ಹರೆಯದವರು ಎನ್ನಲಾಗಿದೆ.
ಮನೆಯಲ್ಲಿ ಇಂಗಾಲದ ಮಾನಾಕ್ಸೈಡ್ ಸಂಗ್ರಹವಾಗಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನೆಯಲ್ಲಿ ಗಾಳಿ ವ್ಯವಸ್ಥೆ ಇರಲಿಲ್ಲ ಮತ್ತು ಇದ್ದ ಒಂದೇ ಒಂದು ಕಿಟಕಿಯನ್ನು ಸಹ ಮುಚ್ಚಲಾಗಿತ್ತು ಎಂದು ವರದಿಯಾಗಿದೆ.
ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇವರು ಹತ್ತಿರದ ಗೋದಾಮಿನಲ್ಲಿ ವಸ್ತುಗಳನ್ನು ಲೋಡ್ ಮಾಡುವ ಮತ್ತು ಇಳಿಸುವ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
‘ಪ್ರಾಥಮಿಕ ತನಿಖೆ ಪ್ರಕಾರ, ಅಡುಗೆ ಮಾಡಿದ್ದರಿಂದ ಇಂಗಾಲದ ಮಾನಾಕ್ಸೈಡ್ ಸಂಗ್ರಹವಾಗಿದೆ. ಸರಿಯಾದ ಗಾಳಿಯಾಡದಿರುವುದರಿಂದ ಕಾರ್ಮಿಕರು ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ, ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಅವರ ಸ್ನೇಹಿತರೊಬ್ಬರು ಮನೆಗೆ ಭೇಟಿ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಬಾಗಿಲಲ್ಲಿ ನಿಂತು ಕೂಗಿದಾಗ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಅವರು ಹೊರಗಿನಿಂದ ಕಿಟಕಿ ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿನ ನಿಖರವಾದ ಕಾರಣವನ್ನು ದೃಢೀಕರಿಸಲು ಅಧಿಕಾರಿಗಳು ಶವಪರೀಕ್ಷೆ ವರದಿ ಮತ್ತು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಾಯುತ್ತಿದ್ದಾರೆ.


