ಗುರುಗ್ರಾಮ: ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಕೆ. ನಟ್ವರ್ ಸಿಂಗ್ (95) ನಿಧನರಾಗಿದ್ದಾರೆ. ಸುದೀರ್ಘ ಅವಧಿಯಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಟ್ವರ್ ಸಿಂಗ್ ಅವರು ಹಲವು ದಿನಗಳಿಂದಲೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಜೀವನದ ಕೊನೆಯ ಕ್ಷಣಗಳಲ್ಲಿ ಪುತ್ರ, ಶಾಸಕರೂ ಆಗಿರುವ ಜಗತ್ ಸಿಂಗ್ ಸೇರಿ ಹಲವು ಕುಟುಂಬಸ್ಥರು ಇದ್ದರು.
ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿ ಭಾರತದ ರಾಜತಾಂತ್ರಿಕತೆಗೆ ಅಪಾರ ಕೊಡುಗೆ ನೀಡಿದ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿಯೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ನಟ್ವರ್ ಸಿಂಗ್ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಸ್ನೇಹ, ಸಂಬಂಧ ಮೂಡಲು ಎರಡೂ ದೇಶಗಳು ಏಕರೂಪದ ವಿದೇಶಾಂಗ ನೀತಿಯನ್ನು ಹೊಂದಿರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ದೇಶಕ್ಕೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ ನಟ್ವರ್ ಸಿಂಗ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಜಗ್ಹೀನಾ ಗ್ರಾಮದಲ್ಲಿ 1929ರ ಮೇ 16ರಂದು ಜನಿಸಿದ ಅವರು ಗೋವಿಂಗ್ ಸಿಂಗ್ ಅವರ ಪ್ರಯಾಗ್ ಕೌರ್ ದಂಪತಿಯ ನಾಲ್ಕನೇ ಪುತ್ರ. ಅಜ್ಮೇರ್ ಹಾಗೂ ಗ್ವಾಲಿಯರ್ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಅವರು, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಪದವಿ ಪಡೆದರು. ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವರು ಉನ್ನತ ಶಿಕ್ಷಣ ಪಡೆದರು.
ವಿದೇಶಾಂಗ ಸೇವೆಗಳಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರು 1953ರಲ್ಲಿ ಭಾರತೀಯ ವಿದೇಶಾಂಗ ಸೇವೆ (IFS) ಸೇರಿದರು. ಚೀನಾ, ನ್ಯೂಯಾರ್ಕ್, ಪೋಲ್ಯಾಂಡ್, ಇಂಗ್ಲೆಂಡ್, ಪಾಕಿಸ್ತಾನ, ಜಮೈಕಾ ಹಾಗೂ ಜಂಬಿಯಾದಲ್ಲಿ ಅವರು ಭಾರತದ ಪರವಾಗಿ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸಿದರು. 1984ರಲ್ಲಿ ಐಎಫ್ಎಸ್ ತೊರೆದ ಅವರು ಕಾಂಗ್ರೆಸ್ ಸೇರಿದರು. ಇದೇ ವರ್ಷ ಲೋಕಸಭೆ ಪ್ರವೇಶಿಸಿದ ಅವರು 1986ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಹಾಯಕ ಸಚಿವರಾದರು.
1991ರಲ್ಲಿ ಕಾಂಗ್ರೆಸ್ ತೊರೆದ ಅವರು ಎನ್.ಡಿ.ತಿವಾರಿ ಹಾಗೂ ಅರ್ಜುನ್ ಸಿಂಗ್ ಅವರ ಜತೆಗೂಡಿ ಕಾಂಗ್ರೆಸ್ ತೊರೆದು, ಆಲ್ ಇಂಡಿಯಾ ಇಂದಿರಾ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿದರು. 1998 ರಲ್ಲಿ ಕಾಂಗ್ರೆಸ್ಗೆ ಮರಳಿದ ಅವರು 1998ರಲ್ಲಿ ಭರತ್ಪುರ ಲೋಕಸಭೆ ಕ್ಷೇತ್ರದಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರು. 2002ರಲ್ಲಿ ರಾಜ್ಯಸಭೆ ಪ್ರವೇಶಿಸಿದ ಅವರು 2004ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾದರು