ಹಾವೇರಿ : ಶಿಗ್ಗಾವಿ ಮತಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದ ಮಾಜಿ ಸಂಸದರು ಆಗಿರುವ ಮಂಜುನಾಥ ಕುನ್ನೂರು ಇದೀಗ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಟಿಕೆಟಿಗೆ ಮಂಜುನಾಥ ಮತ್ತು ಅವರ ಮಗ ರಾಜು ಪೈಪೋಟಿ ನಡೆಸಿದ್ದರು. ಆದರೆ, ಕಾಂಗ್ರೆಸ್ ಯಾಸೀರ್ ಅಹಮ್ನ ಖಾನ್ ಪಠಾಣ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಮಂಜುನಾಥ ಕುನ್ನೂರು ಬಂಡಾಯ ಬಾವುಟ ಹಾರಿಸಿದ್ದಾರೆ. ಪಕ್ಷೇತರರಾಗಿ ಕಣಕ್ಕೆ ಇಳಿಯಲು ಮುಂದಾಗಿರುವ ಅವರು ಪಂಚಮಸಾಲಿ ನಾಯಕರಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದ ಕುನ್ನೂರು ಅವರು ಟಿಕೆಟ್ ನಿರಾಕರಣೆಯಾದಾಗಲೆಲ್ಲ ಪಕ್ಷ ಬದಲಾಯಿಸಿಕೊಳ್ಳುತ್ತಿದ್ದರು. 2009 ರಿಂದ ರಾಜಕೀಯ ಸುಪ್ತವಸ್ತೆಯಲ್ಲಿದ್ದ ಅವರು, 2023ರ ವಿಧಾನಸಭಾ ಚುನಾವಣೆ ವೇಳೆ ಸಕ್ರಿಯ ರಾಜಕೀಯಕ್ಕೆ ಮರಳಿ ಕಾಂಗ್ರೆಸ್ ಸೇರಿದ್ದರು. ಶಿಗ್ಗಾವಿ ಮತಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಆದರೆ, ಪಕ್ಷ ಅವರಿಗೆ ಅವಕಾಶ ನಿರಾಕರಿಸಿತು. 1994 ರಲ್ಲಿ ಶಿಗ್ಗಾವಿಯಲ್ಲಿ ಗೆದ್ದ ಕೊನೆಯ ಕಾಂಗ್ರೆಸ್ಸಿಗರು ಅವರು. 2004 ರಲ್ಲಿ ಕಾಂಗ್ರೆಸ್ ಕುನ್ನೂರವರಿಗೆ ಟಿಕೆಟ್ ನಿರಾಕರಿಸಿದಾಗ ಬಿಜೆಪಿ ಸೇರಿ ದಾರವಾಡ ದಕ್ಷಿಣ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ವಾಜಪೇಯಿ ಅಲೆಯಿಂದ ಕೇಸರಿ ಪಕ್ಷ ಮೊದಲ ಬಾರಿಗೆ ಆ ಸ್ಥಾನ ಗೆದ್ದಿತ್ತು. ಆದರೆ 2008ರಲ್ಲಿ ಇಂಡೋ-ಯು ಎಸ್ ಪರಮಾಣು ಒಪ್ಪಂದದ
ಪರ ಮತದಾನ ಮಾಡಿದಾಗ ಅವರು ಬಿಜೆಪಿಯಿಂದ ಹೊರ ಹೋಗುವುದು ಸನ್ನಿಹಿತವಾಗಿತ್ತು. ಹಣಕ್ಕಾಗಿ ಅವರು ಅಂಥ ನಿರ್ಣಯ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ಅವರು ಆರೋಪ ಅಲ್ಲಗಳೆದು ದೇಶಕ್ಕಾಗಿ ನಾನು ಅಂಥ ನಿರ್ಧಾರ ಮಾಡಿದ್ದಾಗಿ ಹೇಳಿದ್ದರು.
2009 ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೂ ಅವರು ಸೋಲಿನ ರುಚಿ ಕಂಡರು. 2014 ರ ಲೋಕಸಭಾ ಚುನಾವಣೆಗೆ ಪಕ್ಷ ಅವರನ್ನು ಪರಿಗಣಿಸದ ಕಾರಣ 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರ್ಪಡೆಗೊಂಡರು. ಪಕ್ಷದಿಂದ ಯಾವುದೇ ಉತ್ತಮ ಸ್ಥಾನಮಾನ ಪಡೆಯದ ಕಾರಣ 2023 ರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಅವರಿಗೆ ಪಕ್ಷ ಪರಿಗಣನೆ ಮಾಡಲಿಲ್ಲ. ಕುನ್ನೂರು ಅವರು ಆಗಾಗ ಪಕ್ಷ ಬದಲಾಯಿಸುವ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಚುನಾವಣೆಗೆ ಮುಂಚೆ ತಾವು ಇದ್ದ ಪಕ್ಷ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಹೀಗಾಗಿ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆದರೆ ನಾನು ಅಂತ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.