ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಅವರು ಅಖಾಡಕ್ಕೆ ಇಳಿದಿದ್ದಾರೆ. ಮಾಡು ಇಲ್ಲವೇ ಮಡಿ ಎಂಬ ಹೋರಾಟಕ್ಕೆ ಅವರು ಸಜ್ಜಾಗಿದ್ದು ಜುಲೈ 18 ರಂದು ಹುಕ್ಕೇರಿಯಲ್ಲಿ ಬೃಹತ್ ಸಮಾವೇಶದ ಮೂಲಕ ತಮಗಿರುವ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಪ್ರತಿಷ್ಠಿತ ಚುನಾವಣೆಯಲ್ಲಿ ಗೆದ್ದೇ ತೀರಬೇಕು ಎಂಬ ಛಲದಲ್ಲಿರುವ ಅವರು ಈ ಸಮಾವೇಶಕ್ಕೆ ಸಾವಿರಾರು ಜನರನ್ನು ಸೇರಿಸಲು ಪಣತೊಟ್ಟಿರುವುದು ವಿಶೇಷವಾಗಿದೆ.
ಹುಕ್ಕೇರಿಯ ವಿಶ್ವರಾಜ ಭವನ ಸಮಾವೇಶಕ್ಕೆ ಸಜ್ಜಾಗಿದೆ. ರಮೇಶ ಕತ್ತಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಈ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಪಣತೊಟ್ಟಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸಿದ್ದತೆ ನಡೆಸಿದ್ದಾರೆ.