ಕಾರವಾರ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್(68) ಬುಧವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗದೆ ಬುಧವಾರ ಸಂಜೆ 5 ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.
ಪತಿ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಹತ್ಯೆಯ ನಂತರ ಶುಭಲತಾ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಕ್ಷೇತ್ರದಲ್ಲಿ ಅಸ್ನೋಟಿಕರ್ ಅಭಿಮಾನಿಗಳ ಜೊತೆಗಿದ್ದ ಶುಭಲತಾರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು.
ಮಗ, ಮಾಜಿ ಸಚಿವ ಆನಂದ ಅಸ್ನೋಟಿಕರ್ ರಾಜಕೀಯಕ್ಕೆ ಬಂದ ನಂತರ ಶುಭಲತಾ ರಾಜಕೀಯದಿಂದ ದೂರವಾಗಿದ್ದರು. ಮೃತರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದು, ಗುರುವಾರ ಸೆ.26 ರಂದು ಕಾರವಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.