ತಿರುವನಂತಪುರಂ : ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಕೇಂದ್ರದ ಮಾಜಿ ಐಟಿ ಸಚಿವ ಮತ್ತು ತಂತ್ರಜ್ಞ-ರಾಜಕಾರಣಿ ರಾಜೀವ ಚಂದ್ರಶೇಖರ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಸೋಮವಾರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಪಕ್ಷದ ಕೇಂದ್ರ ವೀಕ್ಷಕ ಪ್ರಹ್ಲಾದ ಜೋಶಿ ರಾಜ್ಯಾಧ್ಯಕ್ಷ ಹುದ್ದೆಗೆ ಅವರ ಆಯ್ಕೆಯನ್ನು ಘೋಷಣೆ ಮಾಡಿದರು.ರಾಜೀವ ಚಂದ್ರಶೇಖರ ಅವರು ಉನ್ನತ ಸ್ಥಾನಕ್ಕೆ ನಾಮನಿರ್ದೇಶಿತರಾಗಿದ್ದ ಏಕೈಕ ವ್ಯಕ್ತಿಯಾಗಿದ್ದರು ಮತ್ತು ಭಾನುವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದರು. ಘೋಷಣೆಯ ಸಮಯದಲ್ಲಿ, ನಿರ್ಗಮಿತ ಅಧ್ಯಕ್ಷ ಕೆ ಸುರೇಂದ್ರನ್ ಮತ್ತು ರಾಜ್ಯ ಉಸ್ತುವಾರಿ ಪ್ರಕಾಶ ಜಾವಡೇಕರ ಸೇರಿದಂತೆ ಎಲ್ಲಾ ಪ್ರಮುಖ ರಾಜ್ಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಸುರೇಂದ್ರನ್ ಅವರು ಪಕ್ಷದ ಧ್ವಜವನ್ನು ವೇದಿಕೆಯಲ್ಲಿ ನೂತನ ಅಧ್ಯಕ್ಷ ರಾಜೀವ ಚಂದ್ರಶೇಖರ ಅವರಿಗೆ ಔಪಚಾರಿಕವಾಗಿ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ರಾಜೀವ ಚಂದ್ರಶೇಖರ ಅವರು, ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಾಬಲ್ಯ ಹೊಂದಿರುವ ಕೇರಳದಲ್ಲಿ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುವುದು ತಮ್ಮ ಧ್ಯೇಯ ಎಂದು ಅವರು ಘೋಷಿಸಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ ಮತ್ತು ಈ ಗುರಿಯನ್ನು ಸಾಧಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಈ ಪಾತ್ರವನ್ನು ವಹಿಸಿಕೊಳ್ಳಲು ಹೆಮ್ಮೆಯಿದೆ ಎಂದು ಹೇಳಿದರು.
“ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ, ಪಕ್ಷದ ಹೈಕಮಾಂಡ್-ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಅವರು ಹೇಳಿದರು. “ಎಲ್ಲಾ ಮಾಜಿ ರಾಜ್ಯಾಧ್ಯಕ್ಷರು ಮತ್ತು ಪಕ್ಷಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರಿಗೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅವರ ಸಮರ್ಪಣೆ ನನ್ನ ಮುಂದಿನ ಪ್ರಯಾಣದಲ್ಲಿ ಮಾರ್ಗದರ್ಶಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದರು.
ಕೇರಳದಲ್ಲಿ ಬೆಳೆಯುತ್ತಿರುವ ಬಿಜೆಪಿ ಪ್ರಭಾವವನ್ನು ಪ್ರತಿಬಿಂಬಿಸಿದ ರಾಜೀವ ಚಂದ್ರಶೇಖರ, ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಎತ್ತಿ ತೋರಿಸಿದರು. ಬಿಜೆಪಿ ಯಾವಾಗಲೂ ಕಾರ್ಯಕರ್ತರ ಪಕ್ಷವಾಗಿದ್ದು, ಭವಿಷ್ಯದಲ್ಲಿಯೂ ಹಾಗೆಯೇ ಉಳಿಯಲಿದೆ ಎಂದು ಅವರು ಹೇಳಿದರು.
ಕೇರಳದ ಎಡಪಕ್ಷಗಳ ಸರ್ಕಾರವನ್ನು ಟೀಕಿಸಿದ ಅವರು, ಸಾಲವನ್ನು ನೆಚ್ಚಿಕೊಂಡು ಎಷ್ಟು ದಿನ ಬದುಕಬಹುದು ಎಂದು ಪ್ರಶ್ನಿಸಿದರು. ರಾಜ್ಯವು ಸಾಲದ ಮೇಲೆ ಏಕೆ ಹೆಚ್ಚು ಅವಲಂಬಿತವಾಗಿದೆ. ಕೇರಳದ ಅಭಿವೃದ್ಧಿ ಕುಂಠಿತವಾಗಿದೆ. ಸವಾಲುಗಳು ಉಳಿದಿವೆ, ಆದರೆ ಬಿಜೆಪಿಯ ಧ್ಯೇಯವೆಂದರೆ ರಾಜ್ಯವನ್ನು ಪರಿವರ್ತಿಸುವುದು. ಅವಕಾಶಗಳಿಲ್ಲದೆ, ನಮ್ಮ ಯುವಕರು ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ. ನಮಗೆ ಹೂಡಿಕೆಯನ್ನು ಆಕರ್ಷಿಸುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ಕೇರಳ ಬೇಕು” ಎಂದು ಅವರು ಪ್ರತಿಪಾದಿಸಿದರು.
ತಮ್ಮ ಭಾಷಣದಲ್ಲಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳನ್ನು ಉಲ್ಲೇಖಿಸಿದ ಅವರು, “ಶಿಕ್ಷಣದಿಂದ ಪ್ರಗತಿ, ಸಂಘಟನೆಯಿಂದ ಶಕ್ತಿ ಮತ್ತು ಪ್ರಯತ್ನದಿಂದ ಸಮೃದ್ಧಿ ಎಂದು ಹೇಳಿದರು.
ಅವರು ಮೂರು ಅವಧಿಗೆ ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿದ್ದಾರೆ ಮತ್ತು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ಹೆಚ್ಚುವರಿಯಾಗಿ, ಅವರು ಎನ್ಡಿಎ(NDA)ಯ ಕೇರಳ ಘಟಕದ ಉಪಾಧ್ಯಕ್ಷರಾಗಿದ್ದಾರೆ.
ರಾಜೀವ ಚಂದ್ರಶೇಖರ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಿಂದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋತರು.
ಗುಜರಾತ್ನ ಅಹಮದಾಬಾದ್ನಲ್ಲಿ ಕೇರಳದ ಪೋಷಕರಿಗೆ ಜನಿಸಿದ ರಾಜೀವ ಚಂದ್ರಶೇಖರ ಅವರ ಕುಟುಂಬದ ಬೇರುಗಳು ತ್ರಿಶೂರ್ನಲ್ಲಿವೆ. ಅವರ ಮಾವ ಟಿ ಪಿ ಜಿ ನಂಬಿಯಾರ್ ಬಿಪಿಎಲ್ ಗ್ರೂಪ್ ಸಂಸ್ಥಾಪಕರು.
ಕೆ ಸುರೇಂದ್ರನ್ ಅವರು ರಾಜ್ಯಾಧ್ಯಕ್ಷರಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರಿಂದ ಚುನಾವಣೆ ನಡೆಯಿತು.press