ತಿರುವನಂತಪುರ: ಕೇರಳದ ಮಾಜಿ ಮುಖ್ಯಮಂತ್ರಿ, ಸಿಪಿಐ
(ಎಂ)ನ ಹಿರಿಯ ಮುಖಂಡ ವಿ. ಎಸ್. ಅಚ್ಯುತಾನಂದನ್ ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 101 ವರ್ಷದ ಅಚ್ಯುತಾನಂದನ್ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು.
ಏಳು ಬಾರಿ ಶಾಸಕರಾಗಿದ್ದ ಅಚ್ಯುತಾನಂದನ್, 2006ರಿಂದ 2011ರವರೆಗೆ ಕೇರಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ರಾಜಕೀಯ ಬದುಕಿನಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದರು.
ಕಮ್ಯುನಿಸ್ಟ್ ಪಕ್ಷದ ವಿಭಜನೆಯ ನಂತರ 1964ರಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ)ವನ್ನು ಸ್ಥಾಪಿಸಿದವರಲ್ಲಿ ಇವರು ಒಬ್ಬರು.