ಸತಾರ : ಮಹಾರಾಷ್ಟ್ರದ ಸತಾರಾದ ಸಮರ್ಥ್ ಮಹಾಂಗ್ಡೆ ಎಂಬ ಕಾಲೇಜು ಯುವಕ ಜ್ಯೂಸ್ ಮಾರಿ ಸಂಪಾದನೆ ಮಾಡುತ್ತಿದ್ದ. ಆದರೆ ಕೆಲಸದಲ್ಲಿ ತಲ್ಲೀನನಾಗಿದ್ದ ಈ ಯುವಕನಿಗೆ ಪರೀಕ್ಷೆ ಇದ್ದದ್ದೇ ಮರೆತುಹೋಗಿದೆ. ಇವತ್ತು ಪರೀಕ್ಷೆ ಅಲ್ಲವೇ ಎಂದು ನೆನಪಾದಾಗ ಪರೀಕ್ಷೆಗೆ ಇನ್ನೇನು 15-20 ನಿಮಿಷವಷ್ಟೇ ಇದೆ. ಇನ್ನು ಟ್ರಾಫಿಕ್ ಎಂದರೆ ಕೇಳಬೇಕೆ? ಕಾಲೇಜಿಗೆ ಹೋಗಲು ಏನಿಲ್ಲವೆಂದರೂ ಅರ್ಧ-ಮುಕ್ಕಾಲು ಗಂಟೆ ಬೇಕು. ಅದಕ್ಕಾಗಿ ಏನು ಮಾಡಬೇಕು ಎನ್ನುವುದು ತಿಳಿಯದ ಯುವಕ, ಕೊನೆಗೆ ಐದೇ ನಿಮಿಷದಲ್ಲಿ ಕಾಲೇಜಿಗೆ ಹೋಗಿ ಪರೀಕ್ಷೆಗೆ ಹಾಜರಾಗಿದ್ದಾನೆ. ಪರೀಕ್ಷೆ ಆರಂಭಕ್ಕೂ ಮುನ್ನವೇ ಕಾಲೇಜು ತಲುಪುವಲ್ಲಿ ಸಕ್ಸಸ್ ಕಂಡಿದ್ದಾನೆ!
ಅಷ್ಟಕ್ಕೂ ಇವನು ಮಾಡಿದ್ದು ಏನೆಂದರೆ, ಪ್ಯಾರಾಗ್ಲೈಡಿಂಗ್ ಮೂಲಕ ಕಾಲೇಜಿಗೆ ತಲುಪಿದ್ದು. ಅಷ್ಟಕ್ಕೂ ಇವನ ಕಥೆ ಹೇಳುವುದಾದರೆ, ಸಮರ್ಥ್ ಮಹಾಂಗ್ಡೆ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿ. ಜ್ಯೂಸ್ ಸ್ಟಾಲ್ನಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಪರೀಕ್ಷೆ ಎನ್ನೋದೇ ಮರೆತು ಹೋಗಿದೆ. ಬಳಿಕ ಸ್ನೇಹಿತರು ಕರೆ ಮಾಡಿದಾಗಲೇ ವಿಷಯ ಗೊತ್ತಾಗಿದೆ. ಆದರೆ ಅದಾಗಲೇ ಟೈಮ್ ಆಗಿ ಹೋಗಿದೆ. ಇನ್ನೇನು 15-20 ನಿಮಿಷ ಅಷ್ಟೇ ಇತ್ತು. ರಸ್ತೆ ಮೂಲಕ ಹೋದರೆ ಪರೀಕ್ಷೆ ತಡವಾಗುತ್ತದೆ ಎನ್ನುವುದು ತಿಳಿಯುತ್ತಿದ್ದಂತೆಯೇ, ಕ್ಷಣಮಾತ್ರದಲ್ಲಿ ಬೇರೆಯದ್ದೇ ಯೋಚನೆ ಮಾಡಿದ.
ಕೂಡಲೇ ಜಿಪಿ ಅಡ್ವೆಂಚರ್ಸ್ನ ಸಾಹಸ ಕ್ರೀಡಾ ತಜ್ಞ ಗೋವಿಂದ್ ಯೆವಾಲೆ ಸಹಾಯ ಪಡೆದು ಪ್ಯಾರಾಗ್ಲೈಡಿಂಗ್ ಮಾಡುತ್ತಾ ಪರೀಕ್ಷೆಗೆ ಸರಿಯಾದ ಸಮಯದಲ್ಲಿ ತಲುಪಿದ್ದಾನೆ. ಇವನ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಆದರೂ ಪರೀಕ್ಷೆ ಎನ್ನುವುದೇ ಮರೆತ ವಿದ್ಯಾರ್ಥಿಯ ಬಗ್ಗೆಯೂ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೆಲಸದಲ್ಲಿ ಮಗ್ನನಾಗಿರುವ ಆತ, ಕೆಲಸ ಮತ್ತು ಕಾಲೇಜು ಎರಡನ್ನೂ ನಿಭಾಯಿಸುತ್ತಿರುವುದಕ್ಕೂ ಶ್ಲಾಘನೆ ವ್ಯಕ್ತವಾಗಿದೆ.