ಬೆಳಗಾವಿ: ವೀರಶೈವ ಲಿಂಗಾಯತ ಜಾತಿಗಳ ನಡುವೆ ಕ್ರೈಸ್ತರನ್ನು ಸಮೀಕರಿಸುವ ಹುನ್ನಾರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ಸರಕಾರದ ಉದ್ದೇಶಿತ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದು ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತರೆಂದು ಗುರುತಿಸುತ್ತಿರುವುದನ್ನು ಮಹಾಸಭೆಯು ಪ್ರತಿಭಟಿಸುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹೇಳಿದರು.
ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಹಿಂದೆ ಕರ್ನಾಟಕ ಸರ್ಕಾರ ನ್ಯಾ. ಕಾಂತರಾಜು ಅವರ ನೇತೃತ್ವದಲ್ಲಿ ಜಾತಿ ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷೆಯ ವರದಿ, ದತ್ತಾಂಶಗಳು ಹಲವಾರು ಕಾರಣಗಳಿಂದಾಗಿ ಸ್ವೀಕೃತವಾಗಲಿಲ್ಲ. ಕೊನೆಗೆ ಕರ್ನಾಟಕ ಸರ್ಕಾರವೇ ಕಾಂತರಾಜು ವರದಿಯನ್ನು ಕೈಬಿಟ್ಟಿತ್ತು. ಮಾತ್ರವಲ್ಲ ಇನ್ನೊಂದು ಜಾತಿ ಸಮೀಕ್ಷೆ ಮಾಡುವುದಾಗಿಯೂ ಕೂಡ ಹೇಳಿತು. ಹಿಂದುಳಿದ ಆಯೋಗ ಸಮೀಕ್ಷೆಗೆ ಒಳಪಡಲಿರುವ ಸಾವಿರಕ್ಕೂ ಮಿಕ್ಕ ಜಾತಿ / ಉಪಜಾತಿಗಳ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಿದೆ ಈ ಜಾತಿಗಳ ಪಟ್ಟಿಯಲ್ಲಿ ಅನಧಿಕೃತವಾಗಿ ಹಿಂದು ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತ ಜಾತಿಗಳೆಂದು ಗುರುತಿಸಿರುವುದು ಅಕ್ಷಮ್ಯವೆನಿಸಿದೆ.
ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತರನ್ನಾಗಿಸುವ ಹುನ್ನಾರ ಸಲ್ಲದು. ನಮ್ಮ ಜಾತಿ ಸಮುದಾಯಗಳನ್ನು ಒಡೆಯುವ ಷಡ್ಯಂತ್ರ ಇದರ ಹಿಂದೆ ಇದೆ. ಸಮಾಜವನ್ನು ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ಆಡಗಿದೆ. ನಮ್ಮನ್ನು ಕ್ರೈಸ್ತ ಹೆಸರಿನಲ್ಲಿ ಮತಾಂತರಿತರು ನಮ್ಮ ಜಾತಿಗಳೊಳಗೆ ನುಸುಳಿ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರವಿದೆ. ಹಿಂದು ಮತ್ತು ವೀರಶೈವ ಲಿಂಗಾಯತ ಜಾತಿ ಪಂಗಡಗಳೊಂದಿಗೆ ಸೇರಿಸಿರುವ “ಕ್ರಿಶ್ಚಿಯನ್” ಪದವನ್ನು ಕೈ ಬಿಟ್ಟು ಸಮೀಕ್ಷೆಯನ್ನು ನಡೆಸಬೇಕೆಂದು ಮಹಾಸಭೆಯು ಒತ್ತಾಯಿಸುತ್ತದೆ. ಒಂದು ವೇಳೆ ಸರ್ಕಾರ ಸೂಕ್ತಕ್ರಮ ತೆಗೆದುಕೊಳ್ಳದಿದ್ದರೆ ಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಉಪಾಧ್ಯಕ್ಷ, ಹಿರಿಯ ನ್ಯಾಯವಾದಿ ಎಂ.ಬಿ.ಜೀರಲಿ, ಮಹಾಸಭೆ ವಧು-ವರ ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ.ಎಫ್.ವ್ಹಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬದಾಮಿ, ಚಂದ್ರಶೇಖರ ಬೆಂಬಳಗಿ, ರಮೇಶ ಕಳಸಣ್ಣವರ, ಸೋಮಲಿಂಗ ಮಾವಿನಕಟ್ಟಿ, ಉಮೇಶ ಬಾಳಿ, ಗಿರೀಶ ಕತ್ತಿಶೆಟ್ಟಿ, ವೀಣಾ ನಾಗಮೋತಿ, ಜ್ಯೋತಿ ಭಾವಿಕಟ್ಟಿ, ಅಂಜನಾ ಕಿತ್ತೂರ, ಸರೋಜಿ ನಿಶಾನದಾರ, ಪ್ರಸಾದ ಹಿರೇಮಠ, ಮಹಾಂತೇಶ ಪಾಟೀಲ, ಅಣ್ಣಾ ಸಾಹೇಬ ಕೊರಬು, ಡಾ.ಎಸ್.ಎಂ.ದೊಡಮನಿ, ವಿ.ಕೆ.ಪಾಟೀಲ, ಆರ್.ಪಿ.ಪಾಟೀಲ, ಬಾಲಚಂದ್ರ ಬಾಗಿ, ವಿದ್ಯಾ ಸವದಿ ಮೊದಲಾದ ಪದಾಧಿಕಾರಿಗಳು ಉಪಸ್ಥಿತರಿದ್ದು ಒಮ್ಮತದ ನಿರ್ಣಯವನ್ನು ಕೈಗೊಂಡರು.