ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಮೇಯರ್ ಹುದ್ದೆ ಇದೀಗ ನೇಕಾರ ಮಹಿಳೆಗೆ ಒಲಿದು ಬಂದಿದೆ. ಪ್ರೀತಿ ಕಾಮಕರ ಎಂಬ ನೇಕಾರ ಸಮುದಾಯದ ಮಹಿಳೆ ಇದೇ ಪ್ರಥಮ ಬಾರಿಗೆ ಬೆಳಗಾವಿಯ ಅತ್ಯಂತ ಪ್ರತಿಷ್ಠಿತ ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಮೇಯರ್ ಹುದ್ದೆ ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಸಮಾಜಕ್ಕೆ ಒಲಿದು ಬಂದಿದೆ. ಇದರಿಂದಾಗಿ ನೇಕಾರ ಸಮುದಾಯ ಇದೀಗ ಸಂತಸಗೊಂಡಿದ್ದು ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ. ನೇಕಾರರ ಹರ್ಷೋದ್ಗಾರ ಮುಗಿಲು ಮುಟ್ಟಿದೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನೇಕಾರ ಸಮುದಾಯ ಪ್ರಾಬಲ್ಯ ಹೊಂದಿದೆ. ಸುಮಾರು 35,000ಕ್ಕೂ ಅಧಿಕ ಮತದಾರರು ಇಲ್ಲಿದ್ದಾರೆ. ವಡಗಾವಿ,ಖಾಸಬಾಗ, ಭಾರತ ನಗರ ಮುಂತಾದ ಪ್ರದೇಶಗಳಲ್ಲಿ ನೇಕಾರ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು ಇವರ ಮಾತೃಭಾಷೆ ಕನ್ನಡವಾಗಿದೆ. ನೇಕಾರ ಸಮುದಾಯದ ಮಹಿಳೆಯೊಬ್ಬರು ಅದರಲ್ಲೂ ಕನ್ನಡಿಗರು ಮೇಯರ್ ಆಗುತ್ತಿರುವುದಕ್ಕೆ ಇಡೀ ನೇಕಾರ ಸಮಾಜ ಬಹಳ ಸಂತಸ ಗೊಂಡಿದ್ದು ಇದಕ್ಕೆ ಮುಖ್ಯ ರೂವಾರಿಯಾಗಿರುವ ಅಭಯ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದೆ.
ನೇಕಾರ ಸಮುದಾಯದ ಮಹಿಳೆ ಪ್ರೀತಿ ಕಾಮಕರ ಅವರು ಚೊಚ್ಚಲ ಬಾರಿಗೆ ಆಯ್ಕೆಯಾಗಿದ್ದು ಮೊದಲ ಪ್ರಯತ್ನದಲ್ಲೇ ಅವರಿಗೆ ಮೇಯರ್ ಹುದ್ದೆ ಲಭಿಸಿದೆ.


