ಬೆಳಗಾವಿ :
ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುವ ವಿವಿಧ ಸಾಮಗ್ರಿಗಳ ದರಗಳನ್ನು ನಿಗದಿಪಡಿಸಿ ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ. ನೀತಿಸಂಹಿತೆ ಜಾರಿಯಲ್ಲಿರುವಾಗ ಕೈಗೊಳ್ಳಲಾಗುವ ಪ್ರಚಾರದ ವೆಚ್ಚವನ್ನು ಈ ದರಗಳ ಆಧಾರದ ಮೇಲೆಯೇ ಲೆಕ್ಕ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ವಿಧಾನಸಭಾ ಚುನಾವಣಾ -2023 ರ ಪ್ರಚಾರ ಸಾಮಗ್ರಿಗಳ ದರ ನಿಗದಿ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಫೆ.16) ನಡೆದ ಅಧಿಕಾರಿಗಳ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ವೇಳೆ ಕೆಲ ಸಾಮಗ್ರಿಗಳ ದರಗಳು ಅಥವಾ ವೆಚ್ಚವು ನಿಗದಿತ ದರಕ್ಕಿಂತ ಕಡಿಮೆ ಇದ್ದರೆ ಸಂಬಂಧಿಸಿದವರು ನಿಯಮಾನುಸಾರ ಸಲ್ಲಿಸುವ ರಶೀದಿಯನ್ನು ಕೂಡ ಪರಿಗಣಿಸಲು ಅವಕಾಶಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು.
ನೀತಿಸಂಹಿತೆ ಜಾರಿಯಲ್ಲಿರುವ ವೇಳೆ ಪ್ರಚಾರಕ್ಕಾಗಿ ಬಳಸಬಹುದಾದ ಪ್ರತಿಯೊಂದು ಸಾಮಗ್ರಿಗಳನ್ನು ಪಟ್ಟಿ ಮಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರುಕಟ್ಟೆ ದರ ನಿಗದಿಪಡಿಸಲಾಗಿರುತ್ತದೆ. ಪ್ರಚಾರ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಿದಾಗ ಮಾತ್ರ ಚುನಾವಣಾ ವೆಚ್ಚದಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಚರ್ಚೆಯ ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ದರಗಳು ಹಾಗೂ ಗುಣಮಟ್ಟ ಆಧರಿಸಿ ಕೆಲವು ಸಾಮಗ್ರಿಗಳ ದರಗಳನ್ನು ಕಡಿಮೆ ಮಾಡಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.
ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ್ ಘಾಳಿ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಪರಶುರಾಮ್ ದುಡಗುಂಟಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಚುನಾವಣಾ ಶಾಖೆಯ ತಹಶಿಲ್ದಾರ ಸಾರಿಕಾ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳು ಮತ್ತು ನೋಂದಾಯಿತ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ದರ ನಿಗದಿ ಕುರಿತು ವಿಸ್ತೃತ ಚರ್ಚೆ ನಡೆಸಿ, ದರ ನಿಗದಿಪಡಿಸಿದರು.