ಸಾಂಕ್ರಾಮಿಕ ರೋಗದ ಆರಂಭಿಕ ಅಲೆಯಲ್ಲಿ ತೀವ್ರವಾದ ಕೋವಿಡ್ -19 ಸೋಂಕಿಗೆ ಒಳಗಾದ ವ್ಯಕ್ತಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಎರಡು ಪಟ್ಟು ಅಪಾಯ ಎದುರಿಸಬೇಕಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಆರ್ಟೆರಿಯೊಸ್ಕ್ಲೆರೋಸಿಸ್, ಥ್ರಂಬೋಸಿಸ್ ಮತ್ತು ನಾಳೀಯ ಜೀವಶಾಸ್ತ್ರದ ಜರ್ನಲ್ನಲ್ಲಿ ಈ ವಾರ ಪ್ರಕಟವಾದ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನಿಂದ ಬೆಂಬಲಿತವಾದ ಸಂಶೋಧನೆಯು ಹೆಚ್ಚಿದ ಅಪಾಯವು ಸುಮಾರು ಮೂರು ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದೆ.
ಎಂದಿಗೂ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದರೆ ಮೊದಲನೇ ಅಲೆಯಲ್ಲಿ ಕೋವಿಡ್ -19 ಸೋಂಕಿಗೆ ಒಳಗಾದವರು ಹೃದಯಾಘಾತ, ಪಾರ್ಶ್ವವಾಯುವಿಗೆ ತುತ್ತಗುವುದು ಮತ್ತು ಪ್ರಾಣಹಾನಿ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಇದಲ್ಲದೆ, ಕೋವಿಡ್ನಿಂದ ಆಸ್ಪತ್ರೆಗೆ ದಾಖಲಾದವರಿಗೆ ಈ ಅಪಾಯವು ನಾಲ್ಕು ಪಟ್ಟು ಹೆಚ್ಚಾಗಬಹುದು ಎಂದು ಅದು ಕಂಡುಕೊಂಡಿದೆ.
ಅಧ್ಯಯನದ ನೇತೃತ್ವ ವಹಿಸಿರುವ ಡಾ ಹೂಮನ್ ಅಲ್ಲಾಯೀ ಅವರ ಪ್ರಕಾರ, ತೀವ್ರವಾದ ಕೋವಿಡ್ -19ರಿಂದ ಉಂಟಾಗುವ ಹೃದಯರಕ್ತನಾಳದ ತೊಂದರೆಗಳನ್ನು ಟೈಪ್ 2 ಮಧುಮೇಹಕ್ಕೆ ಹೋಲಿಸಬಹುದು. “2010 ರಿಂದ 2019 ರವರೆಗಿನ ಹೃದಯರಕ್ತನಾಳದ ತೊಂದರೆಯಿಂದಾಗಿ ಮರಣದ ಪ್ರವೃತ್ತಿಗಳು ಸ್ಥಿರವಾಗಿ ಕಡಿಮೆಯಾಗುತ್ತಿತ್ತು. ನಂತರ,ಇದ್ದಕ್ಕಿದ್ದಂತೆ, 2020 ಮತ್ತು 2022 ರ ನಡುವೆ, ಕೋವಿಡ್ -19ರಿಂದ ವೈರಸ್ ನಿಂದಾಗಿ ಹತ್ತು ವರ್ಷಗಳ ಈ ಪ್ರಗತಿಯು ಸಂಪೂರ್ಣವಾಗಿ ನಾಶವಾಯಿತು ಎಂದು ಡಾ ಅಲ್ಲಾಯಿ ಹೇಳಿದ್ದಾರೆ ಎಂದು ಎಬಿಸಿ ನ್ಯೂಸ್ ಉಲ್ಲೇಖಿಸಿದೆ.
“ಈ ಅಧ್ಯಯನವು ಕೋವಿಡ್-19 ರ ಸಂಭಾವ್ಯ ದೀರ್ಘಕಾಲೀನ ಹೃದಯರಕ್ತನಾಳದ ಪರಿಣಾಮಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ, ಇದು ಸಾರ್ವಜನಿಕ ಆರೋಗ್ಯಕ್ಕೆ ಇನ್ನೂ ಅಪಾಯವನ್ನುಂಟು ಮಾಡಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ” ಎಂದು ಎನ್ಐಎಚ್ (NIH) ನ್ಯಾಷನಲ್ ಹಾರ್ಟ್, ಲಂಗ್ಸ್ ಹಾಗೂ ಬ್ಲಡ್ ಇನ್ಸ್ಟಿಟ್ಯೂಟ್(NHLBI)ನಲ್ಲಿ ಹೃದಯ ರಕ್ತನಾಳದ ವಿಜ್ಞಾನ ವಿಭಾಗದ ನಿರ್ದೇಶಕ ಡಾ.ಡೇವಿಡ್ ಗಾಫ್ ಹೇಳುತ್ತಾರೆ. ಎನ್ಎಚ್ಎಲ್ಬಿಐ(NHLBI) ಅಧ್ಯಯನಕ್ಕೆ ಹೆಚ್ಚಾಗಿ ಧನಸಹಾಯ ನೀಡಿತು.
ತೀವ್ರವಾದ ಕೋವಿಡ್-19 ರೋಗಿಗಳಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವು ರಕ್ತದ ಪ್ರಕಾರವನ್ನು ಒಳಗೊಂಡಿರುವ ಆನುವಂಶಿಕ ಅಂಶವನ್ನು ಹೊಂದಿರಬಹುದು ಎಂದು ಅಧ್ಯಯನವು ಮೊದಲ ಬಾರಿಗೆ ತೋರಿಸಿದೆ. ಕೋವಿಡ್-19ರಿಂದ ಆಸ್ಪತ್ರೆಗೆ ದಾಖಲಾದ A, B, ಅಥವಾ AB ರಕ್ತದ ಪ್ರಕಾರದ ರೋಗಿಗಳಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ದ್ವಿಗುಣಗೊಳಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಆದರೆ O ರಕ್ತದ ಪ್ರಕಾರದ ರೋಗಿಗಳಲ್ಲಿ ಇದು ಕಡಿಮೆ ಕಂಡುಬಂದಿದೆ ಎಂದು ಅಧ್ಯಯನವು ಹೇಳುತ್ತದೆ.
ವಿಜ್ಞಾನಿಗಳು ಯುಕೆ ಬಯೋಬ್ಯಾಂಕ್ನಲ್ಲಿ ದಾಖಲಾದ 10,000 ಜನರ ಡೇಟಾವನ್ನು ಅಧ್ಯಯನ ಮಾಡಿದರು, ಇದು ಯುರೋಪಿಯನ್ ರೋಗಿಗಳ ದೊಡ್ಡ ಬಯೋಮೆಡಿಕಲ್ ಡೇಟಾಬೇಸ್ ಆಗಿದೆ. ದಾಖಲಾತಿ ಸಮಯದಲ್ಲಿ ರೋಗಿಗಳು 40 ರಿಂದ 69 ವರ್ಷ ವಯಸ್ಸಿನವರಾಗಿದ್ದರು. ಮತ್ತು ಇದರಲ್ಲಿ ಕೋವಿಡ್-19 ವೈರಸ್ಗೆ ಧನಾತ್ಮಕ ಪರೀಕ್ಷೆ ಮಾಡಿದ 8,000 ಜನ ಮತ್ತು ಫೆಬ್ರವರಿ 1, 2020 ಮತ್ತು ಡಿಸೆಂಬರ್ 31, 2020 ರ ನಡುವೆ ತೀವ್ರವಾದ ಕೋವಿಡ್-19 ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದ 2,000 ಜನರು ಸೇರಿದ್ದಾರೆ. ಆ ಅವಧಿಯಲ್ಲಿ ಲಸಿಕೆಗಳು ಲಭ್ಯವಿಲ್ಲದ ಕಾರಣ ಯಾವ ರೋಗಿಗಳೂ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಅಧ್ಯಯನ ಹೇಳಿದೆ.
“ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಜನರು ಈಗಾಗಲೇ ಕೋವಿಡ್-19 ಸೋಂಕನ್ನು ಅನುಭವಿಸಿದ್ದಾರೆ, ಜಾಗತಿಕ ಹೃದಯ ಆರೋಗ್ಯದ ಪರಿಣಾಮಗಳು ಗಮನಾರ್ಹವಾಗಿವೆ” ಎಂದು ಈ ಅಧ್ಯಯನ ನೇತೃತ್ವ ವಹಿಸಿದ್ದ ಡಾ. ಹೂಮನ್ ಅಲ್ಲಾಯೆ ಹೇಳಿದ್ದಾರೆ.
ಆವಿಷ್ಕಾರಗಳು ಮುಖ್ಯವಾಗಿ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಸೋಂಕಿಗೆ ಒಳಗಾದ ಜನರಿಗೆ ಅನ್ವಯಿಸುತ್ತವೆ ಎಂದು ಡಾ. ಅಲ್ಲಾಯೆ ಹೇಳುತ್ತಾರೆ. ಇತ್ತೀಚೆಗೆ (2021 ರಿಂದ ಇಲ್ಲಿಯವರೆಗೆ) ತೀವ್ರವಾದ ಕೋವಿಡ್-19 ಹೊಂದಿರುವ ಜನರಿಗೆ ಹೃದಯರಕ್ತನಾಳದ ಕಾಯಿಲೆಯ ಅಪಾಯವು ನಿರಂತರವಾಗಿದೆಯೇ ಅಥವಾ ನಿರಂತರವಾಗಿರಬಹುದೇ ಎಂಬುದು ಅಸ್ಪಷ್ಟವಾಗಿದೆ ಎಂದು ಹೇಳುತ್ತಾರೆ. ವ್ಯಾಕ್ಸಿನೇಷನ್ಗಳ ನಿರ್ಣಾಯಕ ಪಾತ್ರದ ಬಗ್ಗೆ ಒತ್ತಿಹೇಳಿದ ಡಾ. ಅಲಾಯಿ ಅವರು, “ನೀವು ಯಾವುದೇ ಲಸಿಕೆಯನ್ನು ಪಡೆದರೂ, ಲಸಿಕೆ ಅಥವಾ ಬೂಸ್ಟರ್ ನಿಂದಾಗಿ ಕೇವಲ ಆರು ತಿಂಗಳ ನಂತರ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಾಧ್ಯತೆ ಕಡಿಮೆಯಾಗಿದೆ. ಆದರೆ ಕಾಲಾನಂತರದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ, ಅದಕ್ಕಾಗಿಯೇ ನಿಮಗೆ ಬೂಸ್ಟರ್ಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ.
ತೀವ್ರವಾದ ಕೋವಿಡ್-19 ತೊಂದರೆಗೆ ಒಳಗಾದ ವ್ಯಕ್ತಿಗಳು, ವಿಶೇಷವಾಗಿ ಆಸ್ಪತ್ರೆಗೆ ದಾಖಲಾದವರು, ವೈರಸ್ನ ಸಂಭಾವ್ಯ ದೀರ್ಘಕಾಲೀನ ಆರೋಗ್ಯ ಪರಿಣಾಮಗಳ ಬಗ್ಗೆ ಆರೋಗ್ಯ ಸೌಲಭ್ಯವನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
ಯುಕೆ ಬಯೋಬ್ಯಾಂಕ್ನ ರೋಗಿಗಳು ಹೆಚ್ಚಾಗಿ ಬಿಳಿಯರೇ ಆಗಿರುವುದರಿಂದ ಅಧ್ಯಯನವು ಸೀಮಿತವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ, ಹೆಚ್ಚು ಜನಾಂಗೀಯ ವೈವಿಧ್ಯತೆಯನ್ನು ಹೊಂದಿರುವ ಜನಸಂಖ್ಯೆಯಲ್ಲಿ ಫಲಿತಾಂಶಗಳು ಭಿನ್ನವಾಗಿರುತ್ತವೆಯೇ ಎಂಬುದು ಅಸ್ಪಷ್ಟವಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಅಧ್ಯಯನದಲ್ಲಿ ಭಾಗವಹಿಸಿದವರು ಲಸಿಕೆ ಹಾಕದ ಕಾರಣ, ಕೋವಿಡ್ ಲಸಿಕೆಗಳು ಹೃದಯರಕ್ತನಾಳದ ಅಪಾಯದ ಮೇಲೆ ಪ್ರಭಾವ ಬೀರುತ್ತವೆಯೇ ಎಂಬುದನ್ನು ನಿರ್ಧರಿಸಲು ಮತ್ತಷ್ಟು ಅಧ್ಯಯನಗಳು ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.