ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕು ನವಲೂಟಿ ಗುಹೆಯಲ್ಲಿ ಸುಮಾರು ಹತ್ತು ಸಾವಿರ ವರ್ಷಗಳ ಹಿಂದಿನ ಆದಿ ಮಾನವರ ಹೆಜ್ಜೆ ಗುರುತು ಪತ್ತೆಯಾಗಿದೆ. ಅವರು ಶಿಲಾಸಾಧನಗಳನ್ನು ಬಳಸುತ್ತಿದ್ದರು ಎನ್ನುವ ಪುರಾವೆಗಳು ದೊರಕಿವೆ. ಈ ಗುಹೆಯಲ್ಲಿ ಮಧ್ಯ ಶಿಲಾಯುಗದ ಸಲಕರಣೆಗಳನ್ನು ತಜ್ಞರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಸಂಡೂರು ಪದರಶಿಲೆಯ ದಟ್ಟ ಎಲೆ ಉದುರುವ ಕಾಡಿನ 10 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಾಗೈತಿಹಾಸಿಕ ನೆಲೆ ಇದ್ದವು ಎಂಬ ಸಂಗತಿಯನ್ನು ಪತ್ತೆಹಚ್ಚಿದ್ದಾರೆ. ಬಳ್ಳಾರಿಯ ಹೆರಿಟೇಜ್ ಟ್ರಸ್ಟ್ ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ಪೂಟ್ ಸಂಗನಕಲ್ಲು ಪ್ರೀ ಹಿಸ್ಟಾರಿಕ್ ವಸ್ತು ಸಂಗ್ರಹಾಲಯದ ಸದಸ್ಯರು ಹಾಗೂ ಖ್ಯಾತ ಪ್ರಾಗೈತಿಹಾಸಿಕ ತಜ್ಞ ಡಾ.ರವಿ ಕೋರಿ ಶೆಟ್ಟರ್, ಸಮದ್ ಕೊಟ್ಟೂರು ಇವರ ಮಾರ್ಗದರ್ಶನದಲ್ಲಿ ಜೂನ್ ನಲ್ಲಿ ಸಂಶೋಧನೆ ನಡೆದಿತ್ತು. ಮಧ್ಯಶಿಲಾಯುಗದ ಉಪಕರಣಗಳನ್ನು ಹೋಲುವ ಶಿಲಾ ಉಪಕರಣಗಳು ದೊರೆತಿವೆ. ಇದರೊಂದಿಗೆ ದನ ಮತ್ತು ಮೇಕೆಗಳ ಮೂಳೆಗಳು ಸಿಕ್ಕಿವೆ. ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಸುವುದರಿಂದ ಇನ್ನೂ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.