ಚಂಡೀಗಢ: ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ 3 ಕ್ರಿಮಿನಲ್ ಕಾನೂನುಗಳನ್ನು ಕೇಂದ್ರಾಡಳಿತ ಪ್ರದೇಶ ಚಂಡೀಗಢ ಶೇ.100ರಷ್ಟು ಅನುಷ್ಠಾನಗೊಳಿಸಿದೆ. ಈ ಮೂಲಕ ಇವುಗಳನ್ನು ಶತ ಪ್ರತಿಶತ ಜಾರಿ ಮಾಡಿದ ಮೊದಲ ಆಡಳಿತ ಪ್ರದೇಶ ಎಂಬ ಖ್ಯಾತಿಗೆ ಚಂಡೀಗಢ ಪಾತ್ರವಾಗಿದೆ
ಈ 3 ಹೊಸ ಕ್ರಿಮಿನಲ್ ಕಾನೂನುಗಳ ಯಶಸ್ವಿ ಅನುಷ್ಠಾನವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರಕ್ಕೆ ಸಮರ್ಪಿಸಿದರು ಹಾಗೂ ಹಳೆಯ ಬ್ರಿಟಿಷ್ ಕಾನೂನು ನೇಪಥ್ಯಕ್ಕೆ ಸರಿದಿವೆ ಎಂದು ಹರ್ಷಿಸಿದರು.ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ- ಇವು 3 ಹೊಸ ಕಾಯ್ದೆಗಳಾಗಿವೆ. ಇವನ್ನು ಬ್ರಿಟಿಷ್ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಸಂಹಿತೆ ಮತ್ತು ಸಾಕ್ಷಿ ಕಾಯ್ದೆ ಬದಲಿಗೆ ಜು.1ರಿಂದ ಜಾರಿಗೊಳಿಸಲಾಗಿದೆ.
ಶೇ.100 ಜಾರಿ ಎಂದರೇನು?
ಮೂರೂ ಕಾನೂನುಗಳ ಜಾರಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳು, ಸಾಫ್ಟ್ವೇರ್, ತರಬೇತಿ ಪಡೆದ ಮಾನವ ಸಂಪನ್ಮೂಲಗಳು ಮತ್ತು ಹೊಸ ಕಾನೂನುಗಳನ್ನು ಸುಲಭವಾಗಿ ಜಾರಿಗೆ ತರಲು ಸಂಪೂರ್ಣ ಗಣಕೀಕೃತ ನ್ಯಾಯಾಲಯಗಳು- ಇವೆಲ್ಲವನ್ನೂ ಚಂಡೀಗಢದಲ್ಲಿ ಸಂಪೂರ್ಣ ಅನುಷ್ಠಾನ ಮಾಡಲಾಗಿದೆ. ಜತೆಗೆ ಇ-ಸಾಕ್ಷ್ಯ, ನ್ಯಾಯ ಸೇತು, ನ್ಯಾಯ ಶ್ರುತಿ ಮತ್ತು ಇ-ಸಮ್ಮಾನ್ ಎಂಬ ಆ್ಯಪ್ ಆರಂಭಿಸಲಾಗಿದೆ. ಈ ಮೂಲಕ ಹೊಸ 3 ಅಪರಾಧ ಕಾನೂನುಗಳನ್ನು ಶೇ.100ರಷ್ಟು ಜಾರಿಗೆ ತಂದ ಮೊದಲ ಆಡಳಿತ ಪ್ರದೇಶ ಎಂಬ ಖ್ಯಾತಿಯನ್ನು ಚಂಡೀಗಢ ಪಡೆದಿದೆ.