ಬೆಳಗಾವಿ: ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಜನತಾ ಕಾಲೊನಿ ನಿವಾಸಿ ಗೋವಿಂದ ಗಣಪತಿ ವಡ್ಡರ (34) ಫೈನಾನ್ಸ್ ಸಾಲಬಾಧೆಯಿಂದ ವಿಷ ಸೇವಿಸಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೂಲಿ ಕಾರ್ಮಿಕ ಗೋವಿಂದ ಅವರು ಸೆಂಟ್ರಿಂಗ್ ಕೆಲಸದ ಸಾಮಗ್ರಿಗಳ ಖರೀದಿಗೆ ಫೈನಾನ್ಸ್ನಿಂದ ರೂ. 60 ಸಾವಿರ ಹಾಗೂ ಕುಟುಂಬದವರ ಹೆಸರಿನಲ್ಲಿ ಗ್ರಾಮಾಭಿವೃದ್ಧಿ ಸಂಘದಿಂದ ರೂ.ಒಂದು ಲಕ್ಷ ಸಾಲ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಮನೆಯಲ್ಲಿಯೇ ಗುರುವಾರ ರಾತ್ರಿ ವಿಷ ಕುಡಿದಿದ್ದ ಗೋವಿಂದ ಅವರ ಶುಕ್ರವಾರ ಬೆಳಿಗ್ಗೆ ಶವವಾಗಿ ಪತ್ತೆಯಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ಫೈನಾನ್ಸ್ನಿಂದ ಪಡೆದ ಸಾಲದ ಕಂತು ಪಾವತಿಸುವಲ್ಲಿ ರೂ.100 ಕಡಿಮೆ ತುಂಬಿದ್ದಾರೆ ಎಂದು ಆರೋಪಿಸಿ, ಫೈನಾನ್ಸ್ ಸಿಬ್ಬಂದಿ ಮನೆ ಮುಂದೆ ಬಂದು ಗಲಾಟೆ ಮಾಡಿದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಸವದತ್ತಿ ಪಟ್ಟಣದ ಬಸವರಾಜ ಎನ್ನುವವರು ಫೈನಾನ್ಸ್ನಿಂದ ರೂ.55 ಸಾವಿರ ಸಾಲ ಪಡೆದಿದ್ದರು. ವಾರಕ್ಕೆ ರೂ.650ರಂತೆ ಕಂತು ತುಂಬುತ್ತಿದ್ದರು. ಈ ಬಾರಿ ರೂ.100 ಕಡಿಮೆ ತುಂಬಿದ್ದಾರೆ ಎಂದು ಸಿಬ್ಬಂದಿ, ವಸೂಲಿಗೆ ಮನೆ ಮುಂದೆ ಬಂದಿದ್ದರು. ಇದರಿಂದ ಬೇಸತ್ತ ಬಸವರಾಜ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಪ್ರಸಂಗ ವಿಡಿಯೊದಲ್ಲಿದೆ.