ಬೆಳಗಾವಿ :
ರಾಜ್ಯ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಏಪ್ರಿಲ್ 6 ಅಥವಾ 7 ರಂದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಟಿಕೆಟ್ ನೀಡುವ ಮೊದಲು ಪಕ್ಷವು ವಿಭಿನ್ನ ಜನರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ. ಬಹುತೇಕ ಏಪ್ರಿಲ್ 6 ಅಥವಾ 7 ರಂದು ಮೊದಲ ಪಟ್ಟಿ ಹೊರಬೀಳಲಿದೆ. ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ರಾಜ್ಯ ಘಟಕ ಶ್ರಮಿಸುತ್ತಿದೆ ಎಂದು ಹೇಳಿದರು.
ಬಿಜೆಪಿಯು ಎಲ್ಲಾ 39 ಸಂಘಟನಾ ಜಿಲ್ಲೆಗಳಲ್ಲಿ ಸ್ಥಳೀಯ ಮುಖಂಡರಿಂದ ಅಭ್ಯರ್ಥಿಗಳ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಬಿಜೆಪಿ ರಾಜ್ಯದಲ್ಲಿ 97 ವೀಕ್ಷಕರನ್ನು ನೇಮಿಸಿದ್ದು, ಅವರ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಏಪ್ರಿಲ್ 1 ಮತ್ತು 2 ರಂದು ನಿಗದಿಯಾಗಿರುವ ಕೋರ್ ಕಮಿಟಿ ಸಭೆಯಲ್ಲಿ ಶಾರ್ಟ್ ಲಿಸ್ಟ್ ಮಾಡಿದ ಹೆಸರು ಚರ್ಚಿಸಲಾಗುತ್ತದೆ. ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಎರಡೂ ಈಗಾಗಲೇ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಉಳಿದ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಮುಂದಿನ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗುತ್ತಿದೆ. ಈ ನಡುವೆ ಬಿಜೆಪಿ ಸಹ ಇಷ್ಟರಲ್ಲೇ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಹೂರ್ತ ನಿಗದಿ ಮಾಡಿದೆ.