ಬೆಂಗಳೂರು : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಕಾಂಗ್ರೆಸ್ ಕೊನೆಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಬಾಗಲಕೋಟೆ ಕ್ಷೇತ್ರದಿಂದ ಉಮೇಶ ಮೇಟಿ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಕುಟುಂಬದ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಭೆಗಳನ್ನು ನಡೆಸಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸುರ್ಜೆವಾಲಾ ಅವರು ಸಹ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೊತೆ ಸಭೆ ನಡೆಸಿದ್ದರು. ನಂತರ ಕೆಲ ಪ್ರಮುಖರ ಮನವೊಲಿಸಿದ ಕಾಂಗ್ರೆಸ್ ಅಂತಿಮವಾಗಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಮೇರೆಗೆ ಕೆ ಸಿ ವೇಣುಗೋಪಾಲ ಅಧಿಕೃತ ಘೋಷಣೆ ಮಾಡಿದ್ದಾರೆ.
ಎಚ್.ವೈ. ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮೇಟಿಯವರ ಮಕ್ಕಳಲ್ಲಿ ಟಿಕೆಟ್ಗಾಗಿ ತೀವ್ರ ಸ್ಪರ್ಧೆ ನಡೆದಿತ್ತು. ಈ ಪೈಕಿ ಮೇಟಿಯ ಕಿರಿಯ ಪುತ್ರ ಉಮೇಶ ಮೇಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಶಾಮನೂರು ಶಿವಂಶಕರಪ್ಪ ಅವರ ನಿಧನದಿಂದ ತೆರವಾದ ದಾವಣೆಗೆರೆ ದಕ್ಷಿಣ ಕ್ಷೇತ್ರದಲ್ಲಿ ಪೈಪೋಟಿ ತೀವ್ರವಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ಮತಗಳು ಇರುವುದರಿಂದ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಮುಖಂಡರು ಪಟ್ಟು ಹಿಡಿದಿದ್ದರು.
ಸಚಿವ ಜಮೀರ್ ಅಹಮ್ಮದ್ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಾಂಡಿಗೆ ಒತ್ತಡ ಹೇರಿದ್ದರು. ಟಿಕೆಟ್ ಘೋಷಣೆಗೂ ಮೊದಲೇ ಶಾಮನೂರು ಶಿವಶಂಕಪ್ಪ ಅವರ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ ಸಹ ಮಾಡಿದ್ದರು. ತೀವ್ರಗೊಂಡ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಬಗೆಹರಿಸಿ ಸಮರ್ಥ ಅವರಿಗೆ ಟಿಕೆಟ್ ನೀಡಿದೆ.


