ಬೆಳಗಾವಿ :
ಕಿತ್ತೂರು ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪ ನಿದ್ರೆಗೆ ಜಾರಿದ್ದ ಕೊಚೇರಿಯ ವಾಹನ ಮಾಲೀಕರನ್ನು ಬೆದರಿಸಿ ಇತ್ತೀಚಿಗೆ 40,000 ರೂ. ಹಣ ಲೂಟಿ ಮಾಡಲಾಗಿತ್ತು. ಈ ಬಗ್ಗೆ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತ ಹಬೀಬ್ ಶಿಲೇದಾರ ಅವರು ಸಹ ಈ ಬಗ್ಗೆ ಧ್ವನಿ ಎತ್ತಿ ಕಿತ್ತೂರು ಪೊಲೀಸರು ಘಟನೆಯನ್ನು ಗಂಭೀರವಾಗಿ ಗಮನಿಸಿ ದರೋಡೆಕೋರರ
ಹೆಡೆ ಮುರಿಕಟ್ಟುವಂತೆ ಒತ್ತಾಯಿಸಿದ್ದರು. ಇದೀಗ ಪೊಲೀಸರು ಈ ನಿಟ್ಟಿನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ದರೋಡೆಕೋರರು ಯಾರು ಎನ್ನುವುದನ್ನು ಕಂಡು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ತಡರಾತ್ರಿ ರಾಷ್ಟ್ರೀಯ ಹೆದ್ದಾರಿ ಬದಿಗೆ ವಾಹನ ನಿಲ್ಲಿಸಿ ಮಲಗಿಕೊಳ್ಳುತ್ತಿದ್ದ ಚಾಲಕರ ಗುರಿಯಾಗಿಸಿಕೊಂಡು ಅವರ ಬಳಿಯಿದ್ದ ದುಡ್ಡು ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ವೀರಾಪುರ ಓಣಿಯ ಭಜಂತ್ರಿ ಚಾಳದ ಕರೆಮ್ಮನ ಗುಡಿ ಬಳಿಯ ನಿವಾಸಿ ಸುರೇಶ ಪಂಡಿತ ಭಜಂತ್ರಿ (49) ಮತ್ತು ಹೆಬ್ಬಳ್ಳಿ ಚಾಳ ಮುರಳಿ ಕಟ್ಟಡ ಬಳಿಯ ನಿವಾಸಿ ಬಸವರಾಜ ಉರ್ಫ್ ರುದ್ರಪ್ಪ ಹುಚ್ಚಪ್ಪ ಹೆಬ್ಬಳ್ಳಿ (32) ಬಂಧಿತರಾಗಿದ್ದಾರೆ.
ಕಿತ್ತೂರು ಬಳಿಯ ಅಂಬಡಗಟ್ಟಿಯ ‘ಸತೀಶಣ್ಣಾ ಕಲ್ಯಾಣ ಮಂಟಪ’ ಮುಂದೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯ ಸಿದ್ದಯ್ಯ ಶಿವಾನಂದ ಡಂಗೂರ ಜೂನ್ 12ರಂದು ರಾತ್ರಿ ಕ್ರೂಸರ್ ಹಾಗೂ ಹುಕ್ಕೇರಿ ತಾಲೂಕಿನ ಕೊಚೇರಿ ಗ್ರಾಮದ ವಿರೂಪಾಕ್ಷಿ ರುದ್ರಪ್ಪ ನಾಯಕ ಮೇ 23ರಂದು ರಾತ್ರಿ ಟ್ರ್ಯಾಕ್ಟರ್ ನಿಲ್ಲಿಸಿ ಮಲಗಿದ್ದಾಗ ಅವರ ಜೇಬಿನಿಂದ ದುಡ್ಡು ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ದರೋಡೆಕೋರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.