ದೆಹಲಿ/ಬೆಂಗಳೂರು :
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲುವ ಬಯಕೆ ಹೊಂದಿರುವ ಬಿಜೆಪಿ ಈ ಬಾರಿ ಜೆಡಿಎಸ್ ಜೊತೆ ಅಧಿಕೃತವಾಗಿ ಮೈತ್ರಿಗೆ ಮುಂದಾಗಿದೆ. ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಏಟು ನೀಡುವ ನಿಟ್ಟಿನಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಎಷ್ಟರಮಟ್ಟಿಗೆ ಫಲ ನೀಡಲಿದೆ ಎನ್ನುವುದು ಕಾದು ನೋಡಬೇಕಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಕರ್ನಾಟಕದಲ್ಲಿ ಗೆಲ್ಲುವ ಮೂಲಕ ಅಧಿಪತ್ಯ ಸಾಧಿಸಿತ್ತು. ಆದರೆ, ಈ ಬಾರಿ ಜೆಡಿಎಸ್ ಗೆ ಕೆಲ ಕ್ಷೇತ್ರಗಳನ್ನು ಬಿಟ್ಟುಕೊಡುವ ಸಾಧ್ಯತೆ ಗೋಚರಿಸಿದೆ.
ಬಿಜೆಪಿ, ಜೆಡಿಎಸ್ ಮೈತ್ರಿ ಸಂಬಂಧ ಅಂತಿಮ ಮಾತುಕತೆ ವೇಳೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ 6 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. 6 ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ, ಮತ ವಿವರ ಕಲೆ ಹಾಕಿ, ಬಿಜೆಪಿಗಿಂತ ಹೆಚ್ಚು ಮತಗಳು ಇರುವ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬಿಜೆಪಿ ವರಿಷ್ಠ ಹಾಗೂ ಕೇಂದ್ರ ಗೃಹ ಸಚಿವ
ಅಮಿತ್ ಶಾ ನಿವಾಸದಲ್ಲಿ ಹೆಚ್ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಇತರರು ಭಾಗವಹಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯೆ ಮಾತುಕತೆ ನಡೆಯಿತು. ದೆಹಲಿಯ ಕೃಷ್ಣ ಮೆನನ್ ಮಾರ್ಗ್ನಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಮಾತುಕತೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಉಪಸ್ಥಿತರಿದ್ದರು. ಗೋವಾ ಸಿಎಂ ಪ್ರಮೋದ್ ಸಾವಂತ್, ಕುಪೇಂದ್ರ ರೆಡ್ಡಿ, ನಿಖಿಲ್ ಕುಮಾರಸ್ವಾಮಿ ಸಹ ಹಾಜರಿದ್ದರು. ಮಾತುಕತೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಮೈತ್ರಿ ವಿಚಾರವಾಗಿ ಅಧಿಕೃತವಾಗಿ ಕೆಲವು ವಿಚಾರಗಳನ್ನು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಗೊಂದಲವಿಲ್ಲದೆ ಮೈತ್ರಿ; ಕುಮಾರಸ್ವಾಮಿ
ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದೆ ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಮೈತ್ರಿಯಾಗಲಿದೆ ಎಂದು ಅವರು ಹೇಳಿದರು.
ಮೈತ್ರಿ ವಿಚಾರವಷ್ಟೇ ಅಲ್ಲದೆ ಕರ್ನಾಟಕಕ್ಕೆ ಸಂಬಂಧಿಸಿದ ಇತರ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿದ್ದೇವೆ. ಕಾವೇರಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯದ ರೈತರಿಗೆ ಮಾರಕವಾಗುವ ರೀತಿ ಸರ್ಕಾರದ ನಡವಳಿಕೆ ಇದೆ. ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ಮಾಡುವ ಕನಿಷ್ಠ ತಿಳಿವಳಿಕೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ವಿಜಯದಶಮಿ ಬಳಿಕ ಸೀಟು ಹಂಚಿಕೆ :
ಸೀಟು ಹಂಚಿಕೆ ಬಗ್ಗೆ ವಿಜಯದಶಮಿ ಬಳಿಕ ಚರ್ಚೆ ನಡೆಸಲಾಗುವುದು. ಸೀಟು ಹಂಚಿಕೆ ಮುಂಚೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಜೆಡಿಎಸ್ ತಿಳಿಸಿದೆ.
ಜೆಪಿ ನಡ್ಡಾ ಹರ್ಷ:
ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆಯಾಗಿರುವುದಕ್ಕೆ ಜೆಪಿ ನಡ್ಡಾ ಹರ್ಷ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಸೇರ್ಪಡೆಯಿಂದ ಎನ್ಡಿಎ ಮತ್ತಷ್ಟು ಸುಭದ್ರವಾಗಿದೆ. ಪ್ರಧಾನಿ ಮೋದಿ ದೃಷ್ಟಿಕೋನ ಬಲಗೊಳ್ಳಲು ಸಹಕಾರಿ ಎಂದು ನಡ್ಡಾ ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ಗೆ ಸ್ವಾಗತ ಎಂದ ಪ್ರಮೋದ್ ಸಾವಂತ್
ಎನ್ಡಿಎ ಒಕ್ಕೂಟಕ್ಕೆ ಜೆಡಿಎಸ್ ಸೇರ್ಡಡೆಯಾಗಿದ್ದಕ್ಕೆ ಸ್ವಾಗತಿಸುತ್ತೇನೆ ಎಂದು ದೆಹಲಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನನ್ನ ಒಳ್ಳೆಯ ಸ್ನೇಹಿತರು. ಲೋಕಸಭೆಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ 25 ಕ್ಕೂ ಹೆಚ್ಚು ಸೀಟ್ ಬಿಜೆಪಿಗೆ ಸಿಗಲಿದೆ ಎಂದು ಅವರು ಹೇಳಿದರು.
ಆರು ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ; ಇಲ್ಲಿದೆ ಬಲಾಬಲ
ಬಿಜೆಪಿ, ಜೆಡಿಎಸ್ ಮೈತ್ರಿ ಸಂಬಂಧ ಅಂತಿಮ ಮಾತುಕತೆ ವೇಳೆ ಹೆಚ್ಡಿ ಕುಮಾರಸ್ವಾಮಿ 6 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. 6 ಕ್ಷೇತ್ರಗಳಲ್ಲಿ ಪಕ್ಷಗಳ ಬಲಾಬಲ, ಮತ ವಿವರ ಕಲೆ ಹಾಕಿ, ಬಿಜೆಪಿಗಿಂತ ಹೆಚ್ಚು ಮತಗಳು ಇರುವ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅವುಗಳೆಂದರೆ ತುಮಕೂರು, ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಾಗಿವೆ. ವಿಧಾನಸಭಾ ಚುನಾವಣೆಯ ಮತ ಗಳಿಕೆಯ ಪಟ್ಟಿ ಹಿಡಿದುಕೊಂಡೇ ಕುಮಾರಸ್ವಾಮಿ ಅವರು ಗೃಹ ಸಚಿವ ಅಮಿತ್ ಶಾ ಅವರ ಬಳಿ ಮಾತುಕತೆ ನಡೆಸಿದ್ದಾರೆ.
ಆರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳ ಮತ ಗಳಿಕೆ ವಿವರ ಇಲ್ಲಿದೆ;
ತುಮಕೂರು
ಬಿಜೆಪಿ – 4.13 ಲಕ್ಷ ಮತಗಳು ಜೆಡಿಎಸ್ – 4.69 ಲಕ್ಷ ಮತಗಳು ಕಾಂಗ್ರೆಸ್ – 4.35 ಲಕ್ಷ ಮತಗಳು
ಮಂಡ್ಯ
ಕಾಂಗ್ರೆಸ್ – 6.72 ಲಕ್ಷ ಮತಗಳು ಬಿಜೆಪಿ – 1.81 ಲಕ್ಷ ಮತಗಳು ಜೆಡಿಎಸ್ – 5.69 ಲಕ್ಷ ಮತಗಳು
ಹಾಸನ
ಜೆಡಿಎಸ್ – 5.34 ಲಕ್ಷ ಕಾಂಗ್ರೆಸ್ – 4.76 ಲಕ್ಷ ಬಿಜೆಪಿ – 2.99 ಲಕ್ಷ
ಕೋಲಾರ
ಕಾಂಗ್ರೆಸ್ – 5.80 ಲಕ್ಷ ಬಿಜೆಪಿ – 1.94 ಲಕ್ಷ ಜೆಡಿಎಸ್ – 4.71 ಲಕ್ಷ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
ಕಾಂಗ್ರೆಸ್ – 8.12 ಲಕ್ಷ ಮತಗಳು ಬಿಜೆಪಿ – 6.09ಲಕ್ಷ ಜೆಡಿಎಸ್ – 3.62 ಲಕ್ಷ
ಚಿಕ್ಕಬಳ್ಳಾಪುರ
ಕಾಂಗ್ರೆಸ್ – 6.10 ಲಕ್ಷ ಬಿಜೆಪಿ – 5.40 ಲಕ್ಷ ಜೆಡಿಎಸ್ – 2.35 ಲಕ್ಷ
ಬಿಜೆಪಿ-ಜೆಡಿ(ಎಸ್) ಮೈತ್ರಿ 2024ಕ್ಕೆ ಏಕೆ ಮಹತ್ವದ್ದು…?
ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಗೆಲುವಿನ ಹಿಂದಿನ ಕಾರಣವೆಂದರೆ 139 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿರುವ ಜೆಡಿಎಸ್ ಕಳಪೆ ಪ್ರದರ್ಶನ. ಇದು ಸ್ಪರ್ಧಿಸಿದ ಮೂರನೇ ಎರಡರಷ್ಟು ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನೇತೃತ್ವದ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪ್ರಮುಖ ಪಕ್ಷಗಳಾಗಿರುವ ಕರ್ನಾಟಕದಲ್ಲಿ ಜೆಡಿಎಸ್ ದೀರ್ಘಕಾಲದಿಂದ ಪ್ರಬಲ ಮೂರನೇ ಶಕ್ತಿಯಾಗಿದೆ. ಆದಾಗ್ಯೂ, ಪ್ರಾದೇಶಿಕ ಪಕ್ಷವು ರಾಜ್ಯದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಕುಸಿತವನ್ನು ಕಂಡಿತು ಹಾಗೂ ದೂರದ ಮೂರನೇ ಸ್ಥಾನಕ್ಕೆ ದೂಡಿತು.
ಎನ್ಡಿಎ (NDA) ನೇತೃತ್ವದ ಬಿಜೆಪಿ, 2024 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ (JDS) ಜೊತೆಗಿನ ಮೈತ್ರಿಯು ತನ್ನ ಪ್ರಾಬಲ್ಯವನ್ನು ಖಚಿತಪಡಿಸುತ್ತದೆ ಎಂದು ನಂಬುತ್ತದೆ, ಏಕೆಂದರೆ ಕೇಸರಿ ಪಕ್ಷವು ಸಾಂಪ್ರದಾಯಿಕವಾಗಿ ದುರ್ಬಲವಾಗಿರುವ ದಕ್ಷಿಣ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಗಣನೀಯ ಪ್ರಭಾವವನ್ನು ಹೊಂದಿದೆ.
ಕಳೆದ ವಾರ ಜೆಡಿಎಸ್ ಮುಖ್ಯಸ್ಥ ಎಚ್ಡಿ ದೇವೇಗೌಡ ಅವರು ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಮಾತುಕತೆ ಆರಂಭಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದರು ಮತ್ತು ಸ್ಥಾನ ಹೊಂದಾಣಿಕೆ ಕುರಿತು ಎಚ್ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದ್ದರು.