ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನದ ಟಿಕೆಟ್ ಬುಕ್ ಆಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವಿಶೇಷ ತನಿಖಾ ತಂಡದ (ಎಸ್ಐಟಿ) ಎದುರು ವಿಚಾರಣೆಗೆ ಮೇ 31ರಂದು ಹಾಜರಾಗುವುದಾಗಿ ತಿಳಿಸಲು ಅಜ್ಞಾತ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್ ರೇವಣ್ಣ, ಮ್ಯೂನಿಚ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲುಫ್ತಾನ್ಸಾ ಏರ್ಲೈನ್ಸ್ ವಿಮಾನದಲ್ಲಿ ಬರಲಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಆಧಾರದ ಮೇಲೆ ಎಸ್ಐಟಿ ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದು, ಪ್ರಜ್ವಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಅವರನ್ನು ಎಸ್ಐಟಿ ವಶಕ್ಕೆ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಮಾರನೇ ದಿನವೇ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದರು. ಬಳಿಕ ಅವರ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಾಸನ ಜಿಲ್ಲೆಯಲ್ಲಿ ದಾಖಲಾಗಿದ್ದವು. ನಂತರ ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿತ್ತು. ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಪ್ರಜ್ವಲ್ಗೆ ನೋಟಿಸ್ ನೀಡಿತ್ತು. ವಿದೇಶದಲ್ಲಿದ್ದ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಹೀಗಾಗಿ ಎಸ್ಐಟಿ, ಇಂಟರ್ಪೋಲ್ ಮುಖಾಂತರ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.
ಅಲ್ಲದೆ, ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.ಎರಡು ದಿನಗಳ ಹಿಂದೆ ಅಜ್ಞಾತ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್, ಮೇ 31ರಂದು ಬೆಂಗಳೂರಿಗೆ ವಾಪಸ್ ಆಗಿ ಎಸ್ಐಟಿ ಎದುರು ಹಾಜರಾಗುವುದಾಗಿ ತಿಳಿಸಿದ್ದರು.