ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ತಿಂಗಳುಗಳಲ್ಲಿ ಗ್ರೀನ್ ಸಿಗ್ನಲ್ ತೋರಿಸುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಬೆಳಗಾವಿ :
ಇದು ಬೆಳಗಾವಿ ಜಿಲ್ಲೆಯ ಜನತೆಗೆ ಶುಭ ಸುದ್ದಿ. ಯಾಕೆಂದರೆ ಬೆಂಗಳೂರು- ಹುಬ್ಬಳ್ಳಿ ನಡುವೆ ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿರುವ ಒಂದೇ ಭಾರತ ಎಕ್ಸ್ ಪ್ರೆಸ್ ರೈಲು ಬೆಳಗಾವಿವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಮಾಹಿತಿ ನೀಡಿದ್ದು ಬೆಂಗಳೂರು-ಹುಬ್ಬಳ್ಳಿ- ಧಾರವಾಡ ನಡುವಿನ ವಂದೇ ಭಾರತ ಬೆಳಗಾವಿವರೆಗೂ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ಮೊದಲು ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ ಎಕ್ಸಪ್ರೆಸ್ ರೈಲು ಯೋಜನೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲು ಧಾರವಾಡಕ್ಕೂ ವಿಸ್ತರಣೆಯಾಗಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು.
ಆದರೆ, ಹುಬ್ಬಳ್ಳಿ-ಧಾರವಾಡದವರೆಗೆ ಮಾತ್ರ ಸೀಮಿತವಾಗಿದ್ದ ಈ ರೈಲನ್ನು ಬೆಳಗಾವಿವರೆಗೂ ವಿಸ್ತರಣೆ ಮಾಡಬೇಕು ಎನ್ನುವುದು ಜಿಲ್ಲೆಯ ಜನತೆಯ ಒಕ್ಕೊರಲ ಆಗ್ರಹವಾಗಿತ್ತು.
ಇದೀಗ ಕೊನೆಗೂ ರೈಲ್ವೆ ಇಲಾಖೆ ಹಾಗೂ ಕೇಂದ್ರ ಸರಕಾರ ಇದಕ್ಕೆ ಸಹಮತ ಸೂಚಿಸಿದಂತಿದೆ. ಬೆಳಗಾವಿವರೆಗೂ ವಂದೇ ಭಾರತ್ ರೈಲು ವಿಸ್ತರಣೆಯಾದರೆ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಎರಡನೇ ರಾಜಧಾನಿಯಾಗಿರುವ ಬೆಳಗಾವಿ ನಡುವಿನ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಜತೆಗೆ ಎರಡು ನಗರಗಳನ್ನು ಸಂಧಿಸುವುದು ಮತ್ತಷ್ಟು ಸುಲಭವಾಗಲಿದೆ.