ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡದೆ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಬೆಳಗಾವಿಯ ಬಿಜೆಪಿ ಟಿಕೆಟ್ ಆಕಾಂಕ್ಷಿತರು ಹಕ್ಕೊತ್ತಾಯ ಮಂಡಿಸಿದ್ದರು. ಆದರೆ, ರಣಾಂಗಣಕ್ಕಿಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದು ಬಿಜೆಪಿ ಪಾಳಯದಲ್ಲಿ ಭುಗಿಲೆದಿದ್ದ ಅಸಮಾಧಾನವನ್ನು ಕೊನೆಗೂ ಬಹುತೇಕವಾಗಿ ಪರಿಹರಿಸಿದ್ದಾರೆ.
ರಾಜ್ಯದ ವಿವಿಧ ಲೋಕಸಭಾ ಮತ ಕ್ಷೇತ್ರಗಳಲ್ಲಿ ತಲೆದೂರಿದ್ದ ಭಿನ್ನಮತ ಶಮನಕ್ಕೆ ಸ್ವತಃ ಯಡಿಯೂರಪ್ಪ ಸಾರಥ್ಯ ವಹಿಸಿದ್ದರು. ಅದರಂತೆ ಅವರು ಟಿಕೆಟ್ ವಂಚಿತರ ಮನವೊಲಿಕೆಗೆ ಸತತವಾಗಿ ಪ್ರಯತ್ನಿಸಿದ್ದರು. ಕಳೆದೊಂದು ವಾರದಿಂದ ಯಡಿಯೂರಪ್ಪ ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಮುಖಂಡರನ್ನು ಭೇಟಿಯಾಗಿ ಅಸಮಾಧಾನ ಬಗೆಹರಿಸುವ ಪ್ರಯತ್ನ ಮಾಡಿದ್ದರು. ದಾವಣಗೆರೆ, ಕೊಪ್ಪಳ, ಬಳ್ಳಾರಿ ಮುಂತಾದ ಭಾಗಗಳಲ್ಲಿ ಕಂಡುಬಂದಿದ್ದ ಭಿನ್ನಮತ ಶಮನಗೊಳಿಸಿದ್ದರು.
ಇದೀಗ ಬೆಳಗಾವಿಯಲ್ಲೂ ಅಖಾಡಕ್ಕೆ ಇಳಿದ ಯಡಿಯೂರಪ್ಪ ಅವರು ತಮ್ಮ ಐದು ದಶಕದ ರಾಜಕೀಯ ಅನುಭವದಿಂದ ನಾಯಕರಿಗೆ ಮಾರ್ಗದರ್ಶನ ಮಾಡಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಭಿನ್ನಮತವನ್ನು ಮರೆತು ಒಂದಾಗುವಂತೆ ಬಿಜೆಪಿ ನಾಯಕರಿಗೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಿರುವುದನ್ನು ವಿರೋಧಿಸಿ ಬೆಳಗಾವಿಯ ಬಿಜೆಪಿ ಆಕಾಂಕ್ಷಿತರು ಅಸಮಾಧಾನ ಸೂಚಿಸಿದ್ದರು. ಇವರನ್ನು ಸಮಾಧಾನಪಡಿಸಲು ನಿನ್ನೆ ಬೆಳಗಾವಿಗೆ ಆಗಮಿಸಿದ್ದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಮಾಡಿದ್ದ ರಾಜಿ-ಸಂಧಾನ ಕೊನೆಗೂ ಫಲ ಕೊಟ್ಟಿದೆ.
ಮಂಗಳವಾರ ತಡರಾತ್ರಿ ಅವರು ಬಿಜೆಪಿ ನಾಯಕರ ಜೊತೆ ಸಭೆ ನಡೆಸಿ ಎಲ್ಲರೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಜಗದೀಶ ಶೆಟ್ಟರ ಮತ್ತು ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಅತ್ಯಂತ ಹೆಚ್ಚು ಮತದಿಂದ ಆರಿಸಿ ಕಳಿಸಲು ಸಲಹೆ-ಸೂಚನೆ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಸೇರಿದಂತೆ ಬೆಳಗಾವಿಯ ಘಟಾನುಘಟಿ ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದು ಯಡಿಯೂರಪ್ಪ ಅವರ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ.
ಒಟ್ಟಾರೆ ಗಮನಿಸಿದರೆ ಸದ್ಯಕ್ಕೆ ಬೆಳಗಾವಿಯ ಬಂಡಾಯ ತಣ್ಣಗಾದಂತೆ ಕಾಣಿಸುತ್ತಿದೆ. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತೀರ್ಮಾನಕ್ಕೆ ಬಂದಿರುವ ನಾಯಕರು ಯಾವುದೇ ಭಿನ್ನಮತ ಹಾಗೂ ಒಡಕು ತೋರ್ಪಡಿಸದೆ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಪಡಿಸಲು ಪಠಿಸಲು ಮುಂದಾಗಿರುವುದು ಈಗ ಗಮನ ಸೆಳೆದಿದೆ. ಕೊನೆಗೂ ಯಡಿಯೂರಪ್ಪ ಅವರ ಭೇಟಿ ಬೆಳಗಾವಿ ಭೇಟಿ ಫಲಪ್ರದವಾಗಿದೆ.