ಬೆಳಗಾವಿ: ಇತ್ತೀಚೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರ ವಿರುದ್ದ ಕೆಲವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಕುಲಪತಿಗಳ ತೇಜೋವಧೆ ಮಾಡುತ್ತಿರುವುದನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಾಪಕರ ಸಂಘವು ಖಂಡಿಸುತ್ತದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅಧ್ಯಾಪಕರ ಸಂಘವು, ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲವರು ಕುಲಪತಿಗಳ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ. ಇಂಥ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ವಿಶ್ವವಿದ್ಯಾಲಯ ಮತ್ತು ಕುಲಪತಿಗಳ ಘನತೆಗೆ ಕಪ್ಪು ಚುಕ್ಕೆ ತರುವ ಕುತಂತ್ರ ನಡೆಸಿದ್ದಾರೆ. ಆದರೆ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ದಾಖಲೆಗಳಿಂದ ದೃಢಪಟ್ಟಿದೆ.
ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ವಿಶ್ವವಿದ್ಯಾಲಯದ ಪ್ರಗತಿಗೆ ಹಗಲಿರುಳು ದುಡಿಯುತ್ತಿದ್ದು, ಹಲವು ಅಭಿವೃದ್ಧಿಪರ ಯೋಜನೆಗಳಿಂದ ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ನಾವೀನ್ಯಪೂರ್ಣ ಚಿಂತನೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ.
ರಾಚವಿಯಲ್ಲಿ ಪಿ.ಎಂ. ಉಷಾ ಮೇರು ಯೋಜನೆಯಡಿ 100 ಕೋಟಿ ರೂ. ಅನುದಾನದಿಂದ ವಿಜ್ಞಾನ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ತರುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಲ್ಯಾಪ್ ಟ್ಯಾಪ್ ನೀಡುವ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಕಡೆಗೆ ವಿಶೇಷ ಗಮನಹರಿಸುತ್ತಿದ್ದಾರೆ.
ವಿಶ್ವವಿದ್ಯಾಲಯ ಶರವೇಗದಲ್ಲಿ ಅಭಿವೃದ್ಧಿ ಆಗುತ್ತಿರುವುದಕ್ಕೆ ಕುಲಪತಿಗಳ ಅವಿರತ ಪರಿಶ್ರಮ ಹಾಗೂ ಅಧ್ಯಾಪಕರ ಗುಣಾತ್ಮಕ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು ಕಾರಣವಾಗಿರುತ್ತದೆ. ಅಧ್ಯಾಪಕರ ಸಂಶೋಧನೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟದಿಂದ ಕೂಡಿದ್ದು, ಸಂಶೋಧನಾ ಒಡಂಬಡಿಕೆಗಳೊಂದಿಗೆ ಹಲವು ಅಧ್ಯಾಪಕರು ವಿವಿಧ ದೇಶಗಳ ವಿಶ್ವವಿದ್ಯಾಲಗಳೊಂದಿಗೆ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.
ರಾಜ್ಯದ ವಿವಿಧ ರಂಗದಲ್ಲಿ ಸಾಧನೆ ಮಾಡಿದವರನ್ನು ಕರೆಯಿಸಿ ಕಾರ್ಯಕ್ರಮ ಮಾಡುವ ಮೂಲಕ ಸಾಧಕರ ಜ್ಞಾನ -ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸವನ್ನು ಕುಲಪತಿಗಳು ನಿರಂತರವಾಗಿ ಮಾಡುತ್ತಿದ್ದಾರೆ.
ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್, ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಪುರುಷೋತ್ತಮ ಬಿಳಿಮಲೆ, ಜಬ್ಬರ್ ಸಮೊ, ಹಿರೇಮಗಳೂರು ಶ್ರೀ.ಕಣ್ಣನ್ ಅವರಂಥ ಸಾಧಕರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿಚಾರಗಳನ್ನು ಮಂಡಿಸಿದ್ದಾರೆ. ಇದರಿಂದ ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಗ್ರಾಮಾಂತರ ಪ್ರದೇಶಗಳಿಂದಲೇ ಹೆಚ್ಚಾಗಿ ಬರುವ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ.
ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಶೋಧನಾ ಗುಣಮಟ್ಟದ ಗುಣಾತ್ಮಕತೆಗೆ ಕುಲಪತಿಗಳು ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿಎ, ಬಿಎಸ್ಸಿ , ಬಿಕಾಂ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಲ್ಲಿ ಸಂಪೂರ್ಣ ಉಚಿತ ಪ್ರವೇಶ ಕಲ್ಪಿಸಿದ್ದಾರೆ.
ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರ ಕ್ರಿಯಾಶೀಲ ನಾಯಕತ್ವ, ದೂರದರ್ಶಿತ್ವ ಹಾಗೂ ಜ್ಞಾನಪೂರ್ಣವಾದ ಮಾರ್ಗದರ್ಶನಗಳು ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಅವಶ್ಯಕವಾಗಿರುತ್ತದೆ. ಮುಂದುವರಿದು, ವಿಶ್ವವಿದ್ಯಾಲಯವು ಹಿರೆಬಾಗೇವಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ (ವಿಜ್ಞಾನ) ಕ್ಯಾಂಪಸ್ಗೆ ಸ್ಥಳಾಂತರವಾಗುವ ಈ ಹಂತದಲ್ಲಿ ಆಡಳಿತಾಧಿಕಾರಿಗಳ ಗಮನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಸೂಕ್ತವಾಗಿರುತ್ತದೆ. ಆದುದರಿಂದ, ಮಾನ್ಯ ಕುಲಪತಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಿದ ಆರೋಪಗಳು ಸತ್ಯಕ್ಕೆ ದೂರವಾಗಿರುವುದು. ಇದನ್ನು ಶಿಕ್ಷಕರ ಸಂಘವು ಬಲವಾಗಿ ಖಂಡಿಸುತ್ತಾ, ಈ ಭಾಗದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.