ಬೆಂಗಳೂರು :
ವಿ ಆರ್ ಎಲ್ ಸಮೂಹ ಸಂಸ್ಥೆಯ ಒಡೆತನದ ದಿಗ್ವಿಜಯ ಸುದ್ದಿ ವಾಹಿನಿ ಕೊನೆಗೂ ರಿಪಬ್ಲಿಕ್ ಟಿವಿ ಸ್ಥಾಪಕ ಅರ್ನಾಬ್ ಗೋಸ್ವಾಮಿ ಪಾಲಾಗಿದೆ.
ದಿಗ್ವಿಜಯ ಸುದ್ದಿವಾಹಿನಿ ಮಾಲಿಕ ಆನಂದ ಸಂಕೇಶ್ವರ ಶುಕ್ರವಾರ ದಿಗ್ವಿಜಯ ಮಾಲೀಕತ್ವವನ್ನು ಅರ್ನಾಬ್ ಗೆ ಹಸ್ತಾಂತರಿಸಿದ್ದಾರೆ. ಇನ್ನು ಕೆಲ ಕಾಲ ದಿಗ್ವಿಜಯ ಹೆಸರಿನಲ್ಲಿ ಮುಂದುವರೆಯಲಿದ್ದು, ನಂತರ ರಿಪಬ್ಲಿಕ್ ಕನ್ನಡ ವಾಹಿನಿ ಹೆಸರಲ್ಲಿ ಪ್ರಸಾರವಾಗಲಿದೆ. ಹೊಸ ಸುದ್ದಿ ವಾಹಿನಿಗೆ ಕನ್ನಡಿಗರೇ ಆಗಿರುವ ನಿರಂಜನ್ ಸಂಪಾದಕರಾಗಿದ್ದಾರೆ. ಬೆಂಗಳೂರು ಕ್ರೈಸ್ಟ್ ಕಾಲೇಜಿನಲ್ಲಿ ಓದಿದ ನಿರಂಜನ್ ಕನ್ನಡದ ಟಿವಿ 9, ನ್ಯೂಸ್ 9 ನಲ್ಲಿ ಕಾರ್ಯನಿರ್ವಹಿಸಿದ್ದು, ಐದು ವರ್ಷಗಳಿಂದ ರಿಪಬ್ಲಿಕ್ ನಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
ಬೆಂಗಳೂರಿನ ದಿಗ್ವಿಜಯ ನ್ಯೂಸ್ ಕಚೇರಿಯಲ್ಲಿ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅರ್ನಾಬ್ ಗೋಸ್ವಾಮಿ, ಬರುವ ದಿನಗಳಲ್ಲಿ ರಿಪಬ್ಲಿಕ್ ಕನ್ನಡವನ್ನು ಕನ್ನಡದ ನಂಬರ್ ಒನ್ ಚಾನೆಲ್ ಆಗಿ ರೂಪಿಸಲಾಗುವುದು. ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ದಿಗ್ವಿಜಯವನ್ನು ಸಾಧೀನ ಪಡಿಸಿದೆ ಎಂದು ಹೇಳುವುದಿಲ್ಲ. ಇದನ್ನು ನಾನು ಪಾಲುದಾರಿಕೆ ಎಂದು ಕರೆಯಲು ಇಚ್ಚಿಸುವೆ. ಈ ಪಾಲುದಾರಿಕೆ ಸಮೂಹ ಸಂಸ್ಥೆಯನ್ನು ದೇಶದ ನಂಬರ್ ಒನ್ ನ್ಯೂಸ್ ನೆಟ್ವರ್ಕ್ ಆಗಿ ಮಾಡಿದೆ ಎಂದು ಹೇಳಿದರು.
ಆದಷ್ಟು ಬೇಗ ಹೆಚ್ಚು ಹೆಚ್ಚು ಜನರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ, ಪೂರ್ಣ ಪ್ರಮಾಣದಲ್ಲಿ ಪತ್ರಕರ್ತರಿಂದಲೇ ನಿರ್ವಹಿಸಲ್ಪಡುತ್ತಿರುವ ಪತ್ರಕರ್ತರ ಒಡೆತನದಲ್ಲಿರುವ ಜಗತ್ತಿನ ಏಕೈಕ ಸಂಸ್ಥೆ ರಿಪಬ್ಲಿಕ್ ಎನ್ನಲು ಹೆಮ್ಮೆ ಎನಿಸುತ್ತದೆ. 438 ಮಿಲಿಯನ್ (43.8 ಕೋಟಿ) ವೀಕ್ಷಕರನ್ನು ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ ತಲುಪುತ್ತಿದೆ. ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ್, “ನಮ್ಮ ವಾಹಿನಿಯನ್ನು ಸಂತೋಷದಿಂದ ಹಸ್ತಾಂತರ ಮಾಡಿದ್ದೇವೆ. ಅರ್ನಬ್ ಗೋಸ್ವಾಮಿ ಅವರು ಉತ್ತಮ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದು, ಅವರು ರಿಪಬ್ಲಿಕ್ ಕನ್ನಡ ವಾಹಿನಿಯನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಾರೆಂಬ ವಿಶ್ವಾಸ ಇದೆ ಎಂದು ಶುಭ ಕೋರಿದರು.