ಬೆಳಗಾವಿ: ರೈತರೊಬ್ಬರು ಜೀವಂತವಿದ್ದರೂ ಅವರ ಮರಣ ಪ್ರಮಾಣಪತ್ರ ನೀಡಿದ ನಾಲ್ವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಸವದತ್ತಿ ತಾಲ್ಲೂಶಿವ ಸುತಗಟ್ಟಿ ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ಎಂಬುವರು ಇನ್ನೂ ಬದುಕಿದ್ದಾರೆ. ಆದರೆ, 2021ರಲ್ಲೇ ಅವರು ಮರಣ ಹೊಂದಿದ್ದಾರೆ ಎಂದು ಅವರ ದಾಖಲೆಗಳಲ್ಲಿ ದೃಢೀಕರಿಸಲಾಗಿದೆ. ಕಳೆದ ಐದು ವರ್ಷಗಳಿಂದ ರೈತನಿಗೆ ಈ ವಿಷಯ ಗೊತ್ತಿಲ್ಲದೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಈ ಬಗ್ಗೆ ವರದಿ ಪ್ರಕಟವಾದ ಸುದ್ದಿ ಆಧರಿಸಿ ದೂರು ದಾಖಲಿಸಿಕೊಂಡಿರುವುದಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಪ ಎಸಗಿದ ಸುತಗಟ್ಟಿ ಗ್ರಾಮ ಅಡಳಿತಾಧಿಕಾರಿ ನೀಲಾ ಮುರಗೋಡ, ಮುರಗೋಡ ವೃತ್ತದ ಕಂದಾಯ ನಿರೀಕ್ಷಕ ಆರ್.ಎಸ್.ಪಾಟೀಲ, ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಅವರ ಮೇಲೆ ದೂರು ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


