ಬೆಂಗಳೂರು: ಶಾಲಾ ಕೊಠಡಿಯಲ್ಲಿ ಸಹಪಾಠಿಗಳ ಜತೆ ಆಟವಾಡುತ್ತಾ ನೀರು ಚೆಲ್ಲಿ ಗಲೀಜು ಮಾಡಿದ ಕಾರಣಕ್ಕೆ ಕೋಪಗೊಂಡ ಶಿಕ್ಷಕಿಯೊಬ್ಬರನ್ನು ವಿದ್ಯಾರ್ಥಿಯನ್ನು ಥಳಿಸಿದ್ದರಿಂದ ಆತನ ಹಲ್ಲು ಮುರಿದ ಆರೋಪ ಕೇಳಿ ಬಂದಿದ್ದು, ಈಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್ ನಿವಾಸಿಯಾಗಿರುವ ವಿದ್ಯಾರ್ಥಿ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದು, ಆತ ಸಹಪಾಠಿಗಳ ಜತೆ ಗುರುವಾರ ಮಧ್ಯಾಹ್ನ ಶಾಲಾ ಕೊಠಡಿಯಲ್ಲಿ ನೀರು ಚೆಲ್ಲುತ್ತಾ ಆಟವಾಡುತ್ತಿದ್ದ. ಈ ವಿಚಾರ ತಿಳಿದ ಹಿಂದಿ ಶಿಕ್ಷಕಿಯು ಕೋಲಿನಿಂದ ವಿದ್ಯಾರ್ಥಿಯ ಮುಖಕ್ಕೆ ಹೊಡೆದಿದ್ದಾರೆ. ಆಗ ವಿದ್ಯಾರ್ಥಿಯ ಹಲ್ಲು ಮುರಿದಿದೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಆತನ ತಂದೆ ದೂರು ಕೊಟ್ಟಿದ್ದು, ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಚಾರಣೆಗೆ ಬರುವಂತೆ ಶಿಕ್ಷಕಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
”ನಾನು ಮಧ್ಯಾಹ್ನ ಊಟ ಮಾಡಿ ಶಾಲಾ ಕೊಠಡಿಗೆ ಹೋದಾಗ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು. ಅವರೇ ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಯ ಹಲ್ಲು ಮುರಿದಿದೆ. ನಾನು ಆತನಿಗೆ ಹೊಡೆದಿಲ್ಲ. ಆ ವಿದ್ಯಾರ್ಥಿಯ ಮುಖದಲ್ಲಿ ಪಟಾಕಿ ಸಿಡಿತದ ಗಾಯ ಸಹ ಆಗಿತ್ತು. ಮಕ್ಕಳು ಹೊಡೆದಾಡಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳೇ ನನ್ನ ಮೇಲೆ ಗಮ್ ಎರಚಿದ್ದಾರೆ,” ಎಂದು ಶಿಕ್ಷಕಿ ಆರೋಪಿಸಿದ್ದಾರೆ.