ಟೆಹರಾನ್ :
ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಸಂದರ್ಭದಲ್ಲಿ ಈಗಿನ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಕೂದಲೆಳೆ ಅಂತರದಲ್ಲಿ ಬದುಕುಳಿದಿರುವುದು ಜಾಗತಿಕ ಗಮನ ಸೆಳೆದಿದೆ. ಹೊರಬರುತ್ತಿರುವ ವಿವರಗಳ ಪ್ರಕಾರ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಬಲಿಪಡೆದ ಅದೇ ದಾಳಿಯಿಂದ ಮೊಜ್ತಾಬಾ ಕೆಲವೇ ಸೆಕೆಂಡುಗಳ ವ್ಯತ್ಯಾಸದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೊಸದಾಗಿ ನೇಮಕಗೊಂಡ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು, ಸ್ಫೋಟಕ್ಕೆ ಕೆಲವೇ ನಿಮಿಷಗಳ ಮೊದಲು ಕೆಲಸದ ನಿಮಿತ್ತ ಅವರಿದ್ದ ಸಮುಚ್ಚಯದ ಕಾಂಪೌಂಡ್ನಿಂದ ಹೊರಗೆ ಬಂದಿದ್ದರು. ಹೀಗಾಗಿ ಅಮೆರಿಕ-ಇಸ್ರೇಲಿ ದಾಳಿಯಿಂದ ಬದುಕುಳಿದರು ಎಂದು ದಿ ಟೆಲಿಗ್ರಾಫ್ ಪಡೆದ ಸೋರಿಕೆಯಾದ ಆಡಿಯೋ ತಿಳಿಸಿದೆ ಎಂದು ವರದಿಯಾಗಿದೆ.
ಯಾರು ಈ ಮೊಜ್ತಾಬಾ ಖಮೇನಿ?
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರನಾದ ಮೊಜ್ತಾಬಾ ಖಮೇನಿ, ದೀರ್ಘಕಾಲದಿಂದ ಇರಾನ್ನ ರಾಜಕೀಯ ಮತ್ತು ಭದ್ರತಾ ವಲಯದಲ್ಲಿ ಪ್ರಭಾವಶಾಲಿ, ಆದರೆ ಅಷ್ಟಾಗಿ ಪ್ರಚಾರದಲ್ಲಿರದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಯಾವುದೇ ಚುನಾಯಿತ ಅಧಿಕಾರವನ್ನು ಹೊಂದಿಲ್ಲದಿದ್ದರೂ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಧಾರ್ಮಿಕ ಮುಖಂಡರ ಜಾಲದಲ್ಲಿ ಅವರು ಆಳವಾದ ಪ್ರಭಾವ ಹೊಂದಿದ್ದಾರೆ ಎನ್ನಲಾಗಿದೆ. ಈಗ ಅವರು ಇರಾನಿನ ನೂತನ ಸರ್ವೋಚ್ಚ ನಾಯಕರಾಗಿದ್ದಾರೆ.
ದಾಳಿಯ ವೇಳೆ ನಡೆದಿದ್ದೇನು?
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ತೆಹ್ರಾನ್ನ ಹೈ-ಸೆಕ್ಯೂರಿಟಿ ಕಾಂಪೌಂಡ್ ಅನ್ನು ಗುರಿಯಾಗಿಸಿ ಇಸ್ರೇಲ್-ಅಮೆರಿಕ ಕ್ಷಿಪಣಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕರಾಗಿದ್ದ ಅಲಿ ಖಮೇನಿ ಸೇರಿದಂತೆ ಹಲವು ಹಿರಿಯ ನಾಯಕರು ಸಾವಿಗೀಡಾಗಿದ್ದಾರೆ ಮತ್ತು ಅವರಿದ್ದ ಸಂಕೀರ್ಣಕ್ಕೆ ವ್ಯಾಪಕ ಹಾನಿಯಾಗಿದೆ. ವರದಿಗಳ ಪ್ರಕಾರ, ಅಲಿ ಖಮೇನಿ ಅವರೊಂದಿಗೆ ಹಲವಾರು ಹಿರಿಯ ಅಧಿಕಾರಿಗಳು ಮತ್ತು ಆಪ್ತರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಖಮೇನಿ ಅವರ ಕಚೇರಿಯ ಶಿಷ್ಟಾಚಾರದ ಮುಖ್ಯಸ್ಥ ಮಜಾಹರ್ ಹೊಸೇನಿ ಅವರ ಪ್ರಕಾರ, ಮೊಜ್ತಾಬಾ ಅವರು ಕಟ್ಟಡದ ಮುಖ್ಯ ಭಾಗದಿಂದ ಹೊರಬಂದ ಸ್ವಲ್ಪ ಸಮಯದ ನಂತರವೇ ದಾಳಿ ನಡೆದಿದೆ.
ಮೊಜ್ತಾಬಾ ಏನೋ ಕೆಲಸದ ಮೇಲೆ ಅಂಗಳಕ್ಕೆ ಹೋಗಿ ಹಿಂತಿರುಗಬೇಕಿತ್ತು ಎಂಬುದು ದೇವರ ಇಚ್ಛೆಯಾಗಿತ್ತು” ಎಂದು ಹೊಸೇನಿ ಖಾಸಗಿ ಸಭೆಯಲ್ಲಿ ತಿಳಿಸಿದ್ದಾಗಿ ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
“ಅವರು ಹೊರಗಿದ್ದರು ಮತ್ತು ಕಟ್ಟಡದ ಮೇಲಿನ ಮಹಡಿಗೆ ಹೋಗಲು ಸಜ್ಜಾಗುತ್ತಿದ್ದಾಗ ಕ್ಷಿಪಣಿ ದಾಳಿ ನಡೆಯಿತು,” ಎಂದು ಹೊಸೇನಿ ಹೇಳಿದ್ದಾರೆ. ವರದಿಗಳ ಪ್ರಕಾರ, ಅವರು ಕಟ್ಟಡದಿಂದ ಹೊರಬಂದ ಕೂಡಲೇ ಇಸ್ರೇಲ್ನ ‘ಬ್ಲೂ ಸ್ಪಾರೋ’ (Blue Sparrow) ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸಂಕೀರ್ಣಕ್ಕೆ ಅಪ್ಪಳಿಸಿ ಅಯತೊಲ್ಲಾ ಅಲಿ ಖಮೇನಿ ಮತ್ತು ಡಜನ್ಗಟ್ಟಲೆ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಕರನ್ನು ಬಲಿಪಡೆದಿವೆ. ವಿನಾಶದ ತೀವ್ರತೆಯನ್ನು ನೋಡಿದರೆ ಕಟ್ಟಡದ ಒಳಗಿದ್ದವರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇತ್ತು ಎಂದು ಹೇಳಲಾಗಿದೆ.
ಮೊಜ್ತಾಬಾ ಖಮೇನಿ ಬದುಕುಳಿದಿದ್ದು ಹೇಗೆ?
ದಾಳಿ ನಡೆಯುವ ಕೆಲವೇ ಕ್ಷಣಗಳ ಮೊದಲು ಮೊಜ್ತಾಬಾ ಮುಖ್ಯ ಕಟ್ಟಡದಿಂದ ಹೊರಬಂದಿದ್ದರು. ಅವರು ಹೊರಾಂಗಣದ ತೆರೆದ ಪ್ರದೇಶಕ್ಕೆ ಹೋದದ್ದರಿಂದ ಅವರ ಪ್ರಾಣ ಉಳಿದಿದೆ. ಒಂದು ವರದಿಯ ಪ್ರಕಾರ, ಕ್ಷಿಪಣಿ ಅಪ್ಪಳಿಸುವ ಮುನ್ನ ಅವರು “ಕಟ್ಟಡದ ಹೊರಗಿನ ತೆರೆದ ಪ್ರದೇಶಕ್ಕೆ ಕಾಲಿಟ್ಟಿದ್ದರು”, ಈ ಒಂದು ಸಣ್ಣ ನಿರ್ಧಾರ ಅವರ ಜೀವನದಲ್ಲಿ ನಿರ್ಣಾಯಕವಾಯಿತು.
ಬದುಕುಳಿದಿದ್ದರೂ ಸಹ, ಈ ದಾಳಿಯಲ್ಲಿ ಮೊಜ್ತಾಬಾ ಅವರ ಕಾಲುಗಳಿಗೆ ಗಾಯಗಳಾಗಿವೆ ಎಂದು ನಂಬಲಾಗಿದೆ. ದಾಳಿಯ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರಲು ಇದೇ ಕಾರಣ ಎನ್ನಲಾಗುತ್ತಿದೆ.
ಅವರನ್ನೇ ಗುರಿಯಾಗಿಸಿದ್ದು ಏಕೆ ?
ಇರಾನ್ನ ಭವಿಷ್ಯದ ನಾಯಕತ್ವದಲ್ಲಿ ಮೊಜ್ತಾಬಾ ಅವರ ಪಾತ್ರ ಪ್ರಮುಖವಾಗಿರುವುದರಿಂದ ಅವರನ್ನು ಗುರಿಯಾಗಿಸಲಾಗಿತ್ತು. ಇಂತಹ ಪ್ರಭಾವಿ ವ್ಯಕ್ತಿಗಳನ್ನು ಇಲ್ಲವಾಗಿಸುವುದು ದೇಶದ ಕಮಾಂಡ್ ರಚನೆಯನ್ನು ಅಸ್ತವ್ಯಸ್ತಗೊಳಿಸಬಹುದು ಎಂಬುದು ದಾಳಿಯ ಹಿಂದಿನ ಉದ್ದೇಶವಾಗಿತ್ತು. ಈ ಘಟನೆಯು ಇರಾನ್ನ ನಾಯಕತ್ವದ ಸ್ಥಿರತೆಯ ಬಗ್ಗೆ ಅನಿಶ್ಚಿತತೆಯನ್ನು ಮೂಡಿಸಿದೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಆತಂಕವನ್ನು ಹೆಚ್ಚಿಸಿದೆ.


