ಕ್ಯಾಂಪ್ ರೌಡಿ ಸೀಟರ್ ಮೇಲೆ ಮಾರಣಾಂತಿಕ ಹಲ್ಲೆ..!
ಪಾರ್ಟಿ ಮಾಡಲು ಬಂದವನನ್ನು ಮರ್ಡರ್ ಮಾಡಲು ಬಂದವರ್ಯಾರು..?
ಬೆಳಗಾವಿ : ಎರಡು ದಿನಗಳಲ್ಲಿ ಕ್ಯಾಂಪ ಪ್ರದೇಶದಲ್ಲಿರುವ ಎರಡು ರೌಡಿಗಳ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಇಂದು ಒಂದು ಗಂಪಿನ ರೌಡಿಗಳು ಮತ್ತೊಂದು ಗುಂಪಿನ ರೌಡಿಯನ್ನು ಪಾರ್ಟಿ ಮಾಡುವ ಸಂದರ್ಭದಲ್ಲಿ ಆತನ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಮರ್ಡರ್ ಮಾಡಲು ಯತ್ನಿಸಿರುವ ಘಟನೆ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಕ್ಯಾಂಪ್ ಪ್ರದೇಶದ ಓಂಕಾರ ಮೆಣಸೆ ಎಂಬಾತ ಮಾರಣಾಂತಿಕವಾಗಿ ಹಲ್ಲೆಗೊಳಗಾದ ರೌಡಿ. ಇತ ಇಂದು ಮಧ್ಯಾಹ್ನ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇವಾಡಿ ಗ್ರಾಮದ ಹೊಲದಲ್ಲಿ ಗೆಳೆಯರೊಂದಿಗೆ ಪಾರ್ಟಿ ಮಾಡಲು ಬಂದಿದ್ದಾನೆ. ಆ ಸಮಯದಲ್ಲಿ ಕ್ಯಾಂಪ್ ಪ್ರದೇಶದ ಮತ್ತೊಂದು ರೌಡಿಗಳ ಗುಂಪು ಆತನ ಮೇಲೆ ದಾಳಿ ನಡೆಸಿ ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ರ್ತಗಳಿಂದ ಕೊಚ್ಚಿದ್ದಾರೆ. ಹೀಗಾಗಿ ಗಂಭೀರವಾಗಿ ಗಾಯಗೊಂಡ ಇತನನ್ನು ನಗರದ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಇತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಕೇದಾರ ಬಾರ್ ಹತ್ತಿರ ನಡೆದ ಗಲಾಟೆ ಕಾರಣ..?
ಹಲ್ಲೆ ನಡೆಸಿರುವ ರೌಡಿಗಳು ಇತನ ಹಳೆ ಸ್ನೇಹಿತರು ಎಂದು ಹೇಳಲಾಗುತ್ತಿದೆ. ನಿನ್ನೆ(ಸೋಮವಾರ) ರಾತ್ರಿ ಕ್ಯಾಂಪ್ ಪ್ರದೇಶದಲ್ಲಿರುವ ಕೇದಾರ ಬಾರ್ ಹತ್ತಿರ ಆ ಗುಂಪಿನವರ ಮೇಲೆ ರೌಡಿ ಓಂಕಾರ ಮೆಣಸೆ ಹಾಗೂ ಆತನ ಸ್ನೇಹಿತ ಅಭಿಷೇಕ ನಲತವಾಡ ಇಬ್ಬರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಇದರಿಂದ ಸೇಡಿಗೆ ಸೇಡು ತೀರಿಸಿಕೊಳ್ಳಲು ಇಂದು ಆ ಗುಂಪಿನ ರೌಡಿಗಳು ಅಭಿಷೇಕ ನಲತವಾಡ ಎಂಬಾತನನ್ನು ಆತನ ಕ್ಯಾಂಪ ಮನೆಯಿಂದ ಕಿಡ್ನಾಪ್ ಮಾಡಿ ಥಳಿಸಿ ನಂತರ ಓಂಕಾರನನ್ನು ತೋರಿಸುವಂತೆ ಬೆದರಿಕೆ ಹಾಕಿದಾಗ ಆತ, ಓಂಕಾರ ಅಂಬೇವಾಡಿಯಲ್ಲಿ ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆಗ ಆ ರೌಡಿಗಳು ಓಂಕಾರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಈ ಪ್ರಕರಣ ಕುರಿತು ಕಾಕತಿ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.
ಪಿಐ ವಿಜಯ ಶಿನ್ನೂರ, ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಧಾವಿಸಿ ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.