ಬೆಳಗಾವಿ :
ಜಿಲ್ಲೆಯಾದ್ಯಂತ ಸೆಪ್ಟೆಂಬರ್ 25 ರಿಂದ ಆರಂಭಗೊಳ್ಳಲಿರುವ ನಾಲ್ಕನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬುಧವಾರ ಬಿಡುಗಡೆಗೊಳಿಸಿದರು.
ಜಿಪಂ ಸಿಇಓ ಹರ್ಷಲ್ ಭೋಯರ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ರಾಜೀವ್ ಕೂಲೇರ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಲುಬಾಯಿ ರೋಗ ಲಸಿಕಾ ಅಭಿಯಾನ :
ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 25 ರವರೆಗೆ ನಡೆಯಲಿರುವ ಜಾನುವಾರುಗಳ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕೈಗೊಳ್ಳಲು ವ್ಯಾಕ್ಸೀನ್, ಸಿರಿಂಜ್ ಸೇರಿದಂತೆ ಯಾವುದೇ ರೀತಿಯ ವೈದಕೀಯ ಸೌಲಭ್ಯ ಕೊರತೆಯಾಗಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ನಾಲ್ಕನೇ ಸುತ್ತಿನ ಜಾನುವಾರುಗಳ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಲಸಿಕಾ ಅಭಿಯಾನದ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲು ಸೂಚಿಸಬೇಕು. ಪ್ರತಿ ಗ್ರಾಮಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಲಸಿಕಾ ಅಭಿಯಾನ ಯಶಸ್ವಿಗೆ ಅವಶ್ಯಕ ವೈದ್ಯಕೀಯ ಸಲಕರಣೆಗಳು ಪೂರೈಕೆ ಆಗಬೇಕು. ಯಾವುದೇ ಗ್ರಾಮದಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುತ್ತಿರುವ ಕಾಲುಬಾಯಿ ರೋಗದಿಂದ ರಾಜ್ಯವನ್ನು ಮಾಡುವಲ್ಲಿ ಸಹಕರಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ಚಾಲನೆಗೊಳ್ಳಲಿದೆ.
ಕಾಲುಬಾಯಿ ರೋಗ ಎತ್ತು, ಹೋರಿ, ಹಸು ಎಮ್ಮೆ ಮತ್ತು ಹಂದಿಗಳಲ್ಲಿ ಬರುವುದರಿಂದ ಆರ್ಥಿಕತೆ ನಷ್ಟ ಉಂಟುಮಾಡುವ ಮಾರಕ ರೋಗವಾಗಿದೆ. ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆಯಿರುತ್ತದೆ.
ರೋಗದಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವುದು ಅತ್ಯಗತ್ಯವಾಗಿರುವುದರಿಂದ ಲಸಿಕೆದಾರರು ಎಲ್ಲಾ ಗ್ರಾಮಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಿದ್ದಾರೆ, ರೈತರು ಸಾರ್ವಜನಿಕರು, ಹೈನುಗಾರಿಕೆಯಲ್ಲಿ ತೊಡಗಿರುವವರು ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.
ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ರಾಜೀವ್ ಕೂಲೇರ್, ತಾಲೂಕಾ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.