ಬರ ಕುರಿತ ಸಚಿವರ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಸಿಡಿದೆದ್ದ ರೈತ ಸಂಘಟನೆಗಳು
ಬೆಳಗಾವಿ :
ಬರ ಕುರಿತು ಸಚಿವ ಶಿವಾನಂದ ಪಾಟೀಲ ನೀಡಿದ ಹೇಳಿಕೆ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ನಗರದ ಗಣೇಶಪುರ ಬಳಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಆವರಣದ ಬಳಿ ಪ್ರತಿಭಟನೆ ನಡೆಸಿದರು.
ಶಿವಾನಂದ ಪಾಟೀಲ ಅವರ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು. ಸಚಿವರು ಈ ಕೂಡಲೇ ರೈತ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಅವರನ್ನು ರಾಜ್ಯದಲ್ಲಿ ಓಡಾಡಲು ಬಿಡುವುದಿಲ್ಲ, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಶಿವಾನಂದ ಪಾಟೀಲ ಅವರು ಸೋಮವಾರ ಅಥಣಿ ತಾಲೂಕಿನಲ್ಲಿ ನಡೆದ ಸ್ವಸಹಾಯ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ ಸಾಲಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ, ಪದೇ ಪದೇ ಬರಗಾಲ ಬರಲಿ, ಸಾಲಮನ್ನಾ ಆಗುತ್ತದೆ ಎಂದು ರೈತರು ಆಶಿಸುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಬಿಜೆಪಿ- ಜೆಡಿಎಸ್, ರೈತ ಸಂಘಟನೆಗಳ ನಾಯಕರು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕ್ಷಮೆ ಕೇಳುವಂತೆಯೂ ಒತ್ತಾಯಿಸಿದ್ದರು.