ಬೆಳಗಾವಿ : ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ ನ್ಯಾಯಾಲಯದ ಆದೇಶದಂತೆ ಬೆಳಗಾವಿ ಉಪ ವಿಭಾಗಾಧಿಕಾರಿಗಳ (ಎಸಿ) ಕಚೇರಿಯ ಪೀಠೋಪರಣ, ಪ್ರಿಂಟರ್,ಕಂಪ್ಯೂಟರ್ ಗಳನ್ನು ರೈತರು ಜಪ್ತಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ರೈತರು ಜಪ್ತಿ ಮಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ವಿಸ್ತರಣೆಗೆ ಅಲ್ಲಿನ ಪರಿಸರದ ರೈತರು ಜಮೀನು ಕೊಟ್ಟಿದ್ದರು.
2008 ರಲ್ಲಿ 270 ಎಕರೆ ಜಮೀನಿಗೆ ಕೇವಲ 2 ಲಕ್ಷ ಪರಿಹಾರ ನೀಡಲು ಆಡಳಿತ ಮುಂದಾಗಿತ್ತು. ರೈತರು ಈ ಹಣ ಸಾಕಾಗದು ಎಂದು 2011ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿ ಗುಂಟೆಗೆ 40,000 ₹ ದಂತೆ ಒಂದು ಎಕರೆಗೆ 60 ಲಕ್ಷ ₹ ನೀಡಲು ಆದೇಶ ಮಾಡಿದ್ದರೂ ಸಕಾಲಕ್ಕೆ ಆಡಳಿತ ಪರಿಹಾರ ನೀಡಲಿಲ್ಲ. ಹೀಗಾಗಿ ಎಸಿ ಕಚೇರಿ ಪೀಠೋಪಕರಣಗಳನ್ನು ರೈತರು ಜಪ್ತಿ ಮಾಡಿಕೊಂಡಿದ್ದಾರೆ. ಬಸವಂತ ಲಕ್ಷ್ಮಣ ಜೋಯಿ ಎಂಬುವರು ಪ್ರಕರಣದ ಸಂಬಂಧ ನ್ಯಾಯಾಲಯದ ಕಟ್ಟೆ ಹತ್ತಿದ್ದರು. ಸಾಂಬ್ರಾ ವಿಮಾನ ನಿಲ್ದಾಣ ಪರಿಸರದ ಇನ್ನೂ ಸುಮಾರು 20 ರೈತರಿಗೆ ಆಡಳಿತ ಆರು ಕೋಟಿ ರೂಪಾಯಿಗಳನ್ನು ನೀಡಬೇಕಾಗಿದೆ.