ಬೆಳಗಾವಿ : ಹಿಡಕಲ್ ಜಲಾಶಯದಿಂದ ಧಾರವಾಡಕ್ಕೆ ನೀರು ಒಯ್ಯುವ ಯೋಜನೆಗೆ ಜಿಲ್ಲೆಯ ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡ ಹಾಗೂ ಮಾಜಿ ಸಚಿವ ಶಶಿಕಾಂತ ನಾಯಕ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದಿಂದ ನೀರು ತೆಗೆದುಕೊಂಡು ಹೋದರೆ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಮಾರಕವಾಗಲಿದೆ ಎಂದು ಭವಿಷ್ಯ ನುಡಿದರು.
ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 80 ಕಿ.ಮಿ ಉದ್ದದ ಪೈಪ್ ಲೈನ್ ಹಾಕಿ ನೀರು ಪೂರೈಸುವ ಕಾಮಗಾರಿ ಬೆಳಗಾವಿ ಜಿಲ್ಲೆಯಲ್ಲಿ ಭರದಿಂದ ನಡೆದಿದ್ದು ಇದು ಕಾರ್ಯಗತವಾದರೆ ಹುಕ್ಕೇರಿ ತಾಲೂಕು ಮತ್ತು ಬೆಳಗಾವಿಯ ಮಹಾನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಆಗಲಿದೆ. ಅಲ್ಲದೆ ಪಕ್ಕದ ಚಿಕ್ಕೋಡಿ, ಗೋಕಾಕ ತಾಲೂಕುಗಳ ರೈತರ ಕೃಷಿ ಭೂಮಿಗೆ ನೀರು ಅಲಭ್ಯವಾಗಲಿದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಮಾರಕವಾಗಿವೆ. ಈ ಕುರಿತು 3 ಜಿಲ್ಲೆಯ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಆಗ್ರಹಿಸಿದ್ದಾರೆ.
ಘಟಪ್ರಭಾ ನದಿಗೆ ಹಿಡಕಲ್ ಬಳಿ ಕಟ್ಟಲಾಗಿರುವ ಜಲಾಶಯದ ಸಾಮರ್ಥ್ಯ 51 ಟಿ.ಎಂ.ಸಿ ಗಳಾಗಿದ್ದು ಸದ್ಯ ಇಲ್ಲಿಂದ ನಿತ್ಯವೂ ಹುಕ್ಕೇರಿ, ಸಂಕೇಶ್ವರ , ಬೆಳಗಾವಿ ಮಹಾನಗರ ಹಾಗೂ ಹುಕ್ಕೇರಿ ತಾಲೂಕಿನ 100 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಅಲ್ಲದೆ ಜಲಾಶಯದಿಂದ ಚಿಕ್ಕೋಡಿ, ಗೋಕಾಕ ತಾಲೂಕುಗಳು ಮತ್ತು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಕೃಷಿ ಉದ್ದೇಶಕ್ಕಾಗಿ ನೀರು ಪೂರೈಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಹಠಾತ್ತಾಗಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 80 ಕಿ.ಮಿ ಉದ್ದದ ಪೈಪ್ ಲೈನ್ ಹಾಕಿ ನೀರು ಪೂರೈಸುವ ಕಾಮಗಾರಿ ಬೆಳಗಾವಿ ಜಿಲ್ಲೆಯಲ್ಲಿ ಭರದಿಂದ ನಡೆದಿದ್ದು ಇದು ಕಾರ್ಯಗತವಾದರೆ ಹುಕ್ಕೇರಿ ತಾಲೂಕು ಮತ್ತು ಬೆಳಗಾವಿಯ ಮಹಾನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಏಳುವುದು ಖಚಿತ.ಇದಲ್ಲದೆ ಚಿಕ್ಕೋಡಿ, ಗೋಕಾಕ ತಾಲೂಕುಗಳು ಮತ್ತು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಬೆಳೆಗಳಿಗೆ ನೀರು ಪೂರೈಕೆಯಾಗದೇ ಬೆಳೆಗಳು ಬೆಳೆಯುವುದು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಮಹದಾಯಿ-ಕಳಸಾ ಬಂಡೂರಿ ಯೋಜನೆ ಜಾರಿಯಾದರೆ ಹುಬ್ಬಳ್ಳಿ- ಧಾರವಾಡ ಭಾಗಕ್ಕೆ ಅನುಕೂಲವಾಗಲಿದೆ. ಇದಕ್ಕೆ ಪೂರಕ ಎನ್ನುವಂತೆ 2008 ರಲ್ಲಿ ಬೆಳಗಾವಿಯಲ್ಲಿ ನಡೆದ ಪ್ರಥಮ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಹದಾಯಿ-ಕಳಸಾ ಬಂಡೂರಿ ಯೋಜನೆಗೆ ಆಂದಿನ ರಾಜ್ಯದ ಉಪ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಈಶ್ವರಪ್ಪ ಹಾಗೂ ತೋಟಗಾರಿಕಾ ಸಚಿವರು ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಶಶಿಕಾಂತ ನಾಯಿಕ ಅವರು ಮಹದಾಯಿ ಮತ್ತು ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಭೂಮಿ ಪೂಜೆ ನೆರವೆರಿಸಿದ್ದರು. ಆದರೆ ಗೋವಾ ರಾಜ್ಯವು ಇದನ್ನು ವಿರೋಧಿಸಿ ಸುಪ್ರಿಂ ಕೋರ್ಟ್ ಮೆಟ್ಟಲೇರಿತು. ಇದು ನಡೆದು 17 ವರ್ಷಗಳಾದರೂ ಮಹದಾಯಿ ಯೋಜನೆಯ ವಿಷಯವೂ ಇನ್ನೂ ಇತ್ಯರ್ಥವಾಗಿಲ್ಲ. ಕಾರಣ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಅವರು ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಮಹದಾಯಿ- ಕಳಸಾ ಬಂಡೂರಿ ಯೋಜನೆಯ ಜಾರಿಗೆ ಒತ್ತಾಯಿಸಬೇಕು. ನವಿಲು ತೀರ್ಥ ಡ್ಯಾಮ್ ಸರಿಸುಮಾರು 25 TMC ನೀರಿನ ಸಾಮರ್ಥ್ಯ ಇದ್ದು ಹುಬ್ಬಳ್ಳಿ – ಧಾರವಾಡಕ್ಕೆ ಬರೀ 35 ರಿಂದ 40km ಇದೆ. ಹೊಸದಾಗಿ ಹುಬ್ಬಳ್ಳಿ – ಧಾರವಾಡ ಅವಳಿ ನಗರ ಕೈಗಾರಿಕೆಗೆ ಪ್ರತಿದಿನ 25 ಕ್ಯೂಸೆಕ್ಸ್ ನೀರನ್ನು 365 ದಿನಗಳು ಪೂರೈಸಬಹುದು ಆಗ ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದು ಮಾಜಿ ತೋಟಗಾರಿಕಾ ಸಚಿವ ಶಶಿಕಾಂತ ನಾಯಿಕ ಒತ್ತಾಯಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳದೆ ಇದ್ದಲಿ ಬೆಳಗಾವಿ, ಚಿಕ್ಕೋಡಿ,ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ರೈತರು ಮತ್ತು ರೈತ ಸಂಘಟನೆಯವರ ಹೋರಾಟ ಅನಿವಾರ್ಯ ಆಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದನ್ನು ಎದರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.