ಬೆಂಗಳೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಗೆ ರೈತ ಮುಖಂಡರು ಮತ್ತು ರೈತ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಪೂರ್ವ ರೈತ ಮುಖಂಡರು ಮತ್ತು ರೈತ ಹೋರಾಟಗಾರರ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಯ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು.
ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿರುವುದನ್ನು ವಿವರಿಸಿದ ಬಡಗಲಾಪುರ ನಾಗೇಂದ್ರ ಅವರು, ರೈತರ ಮತ್ತು ಜನ ಸಮುದಾಯದ ಪೌಷ್ಠಿಕತೆ ಹೆಚ್ಚಿಸುವ ದಿಕ್ಕಿನಲ್ಲಿ ಸಲಹೆ ನೀಡಿದರು. ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
ಬಹಳ ಕಷ್ಟ ಪಟ್ಟು ಗ್ಯಾರಂಟಿ ಯೋಜನೆಗಳನ್ನು ಇಷ್ಟು ಶೀರ್ಘವಾಗಿ ಜಾರಿ ಮಾಡಿದ್ದೀರಿ. ಇದರ ಅನುಕೂಲ ರಾಜ್ಯದ ಜನರಿಗೆ ಆಗುತ್ತಿರುವ ಹೊತ್ತಲ್ಲಿ ಟೀಕೆಗಳಿಗೆ ಅಂಜುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯಗಳು ರೈತ ಪ್ರತಿನಿಧಿಗಳಿಂದ ವ್ಯಕ್ತವಾಯಿತು.
ಇವೆಲ್ಲದರ ಜತೆಗೆ ಕೃಷಿ ಇಲಾಖೆ ಅಧಿಕಾರಿಗಳು ಬೀಜ, ಗೊಬ್ಬರ ವಿತರಿಸುವುದಕ್ಕೆ ಮಾತ್ರ ಸೀಮಿತ ಆಗದೆ ಇವತ್ತಿನ ಕೃಷಿ ಬೇಡಿಕೆಗಳಿಗೆ ತಕ್ಕಂತೆ ಅಪ್ ಡೇಟ್ ಆಗಬೇಕು, ಕೆರೆಗಳ ಅಭಿವೃದ್ಧಿ, ಮಂಡ್ಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಹಣ ಸಹಾಯ ಕೊಟ್ಟಿರುವುದು ಸ್ವಾಗತಿಸಿ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು ಮುಂದಾಗಬೇಕು, ರೈತ ಯುವಕ-ಯುವತಿಯರಿಗೆ ಭರವಸೆ ಹುಟ್ಟಿಸುವ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಘೋಷಿಸಬೇಕು, ಕೃಷಿಯಲ್ಲಿ ರಾಜ್ಯ ಮಾದರಿ ಆಗುವ ಕಾರ್ಯಕ್ರಮ ರೂಪಿಸಿ ಎನ್ನುವುದೂ ಸೇರಿದಂತೆ ನೂರಕ್ಕೂ ಅಧಿಕ ಬೇಡಿಕೆಗಳನ್ನು ರೈತ ಮುಖಂಡರು ಮುಖ್ಯಮಂತ್ರಿಗಳ ಎದುರು ಇಟ್ಟಿದ್ದಾರೆ.