ಬೆಳಗಾವಿ : ಶುಕ್ರವಾರ ರಾತ್ರಿ ವಂಟಮುರಿ ಕಾಲೋನಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ.
ಬಾಣಂತಿ ನಿಖಿತಾ ಮಾದರ ಎಂಬುವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ಕುಟುಂಬಸ್ಥರು ಶನಿವಾರ ಪ್ರತಿಭಟನೆ ನಡೆಸಿದರು. ಶುಕ್ರವಾರ ಅವರನ್ನು ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಣ್ಣು ಮಗು ಜನಿಸಿತ್ತು. ನಂತರ ಆರೋಗ್ಯದಲ್ಲಿ ಏರುಪೇರು ಕಂಡುಬಂದರೂ ವೈದ್ಯರು ಮಾಹಿತಿ ನೀಡಿಲ್ಲ ಅವರ ನಿರ್ಲಕ್ಷದಿಂದ ಮಹಿಳೆ ಮೃತಪಟ್ಟಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಐ.ಪಿ.ಗಡಾದ ಪ್ರತಿಕ್ರಿಯೆ ನೀಡಿ
ಮಹಿಳೆಗೆ ಸಿಸೇರಿಯನ್ ಮೂಲಕ ಮೊದಲ ಸಲ ಹೆರಿಗೆಯಾಗಿತ್ತು. ಶನಿವಾರ ಬೆಳಗ್ಗೆ 2ನೇ ಹೆರಿಗೆ ಆಗಬೇಕಿತ್ತು. ಆದರೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಡಾ. ರಮೇಶ ದಂಡಗಿ ಪ್ರತಿಕ್ರಿಯೆ ನೀಡಿ, ಬಾಣಂತಿಯ ಕುಟುಂಬಸ್ಥರ ದೂರು ಆಧರಿಸಿ ಪ್ರಕರಣದ ತನಿಖೆಗೆ ತಂಡ ರಚನೆ ಮಾಡುತ್ತೇವೆ. ಸಿಬ್ಬಂದಿ ತಪ್ಪು ಎಸಗಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.