ಬೆಳಗಾವಿ : ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರಿಗೆ ಪ್ರತಿಷ್ಠಿತ ಫ.ಗು.ಹಳಕಟ್ಟಿ ಪ್ರಶಸ್ತಿಯನ್ನು ಜುಲೈ 2ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತಿದೆ.
ಹಳಕಟ್ಟಿ ಅವರು ಬೆಳಗಾವಿ ಹಾಗೂ ಬೆಳಗಾವಿಯ ಪ್ರತಿಷ್ಠಿತ ಕೆಎಲ್ಇ ಜೊತೆಗೆ ಅತ್ಯಂತ ಅವಿನಾಭಾವ ಸಂಬಂಧ ಹೊಂದಿದ್ದರು. 50ರ ದಶಕದಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ನಡೆದ ಲಿಂಗರಾಜ ಜಯಂತಿಯಲ್ಲಿ ಭಾಗವಹಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಬೆಳಗಾವಿಯಲ್ಲಿ ಶಿವಾನುಭವಿ ಹಳಕಟ್ಟಿಯವರ ಅರಿವಿನ ಅರವಟಿಗೆ: ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ 1953 ರಲ್ಲಿ ನಡೆದ ಲಿಂಗರಾಜ ಜಯಂತಿಯಲ್ಲಿ ಫ.ಗು.ಹಳಕಟ್ಟಿಯವರು ಭಾಗವಹಿಸಿದಾಗ ಅವರ ಬಗ್ಗೆ ಜನಜೀವಾಳ ಸಂಪಾದಕೀಯ ಪುಟದ ಬರಹ :
ದುಡ್ಡು ದುಡಿತ : ಜಗತ್ತಿನ ಎರಡು ಪ್ರಬಲ ಶಕ್ತಿಗಳು. ದುಡ್ಡಿನ ಸದ್ವಿನಿಯೋಗದಿಂದ ಮಹತ್ತರ ಕೆಲಸಗಳಾದರೆ ದುಡಿತದ ಸರ್ವಾರ್ಪಣದಿಂದಲೂ ಮಹತ್ತರ ಕೆಲಸಗಳಾಗುವುವೆಂಬುದನ್ನು ಗತಿಸಿದ ಲಿಂಗರಾಜರ ಚರಿತ್ರೆ ಮತ್ತು ಜೀವಿಸಿರುವ ಹಳಕಟ್ಟಿಯವರ ಜೀವನಕ್ರಮದಿಂದ ಕಂಡುಕೊಳ್ಳಬಹುದಾಗಿದೆ. ಲಿಂಗವಂತರಿಗೆ ಎರಡು ವ್ಯಕ್ತಿಗಳು ಆ ಶಕ್ತಿಗಳೂ ಉಸಿರುಕಣ್ಣೂ ಆಗಿದ್ದಾರೆ.
ದುಡ್ಡಿನ ಸರ್ವಾರ್ಪಣ : ಶ್ರೀ ಲಿಂಗರಾಜ ದೇಸಾಯಿಯವರು ತಮ್ಮ ೪೦ ಲಕ್ಷ ರೂ. ಗಳ ಆಸ್ತಿಯನ್ನು ಶಿಕ್ಷಣಕ್ಕೆ ಮೀಸಲಿರಿಸಿ ಕರ್ನಾಟಕದಲ್ಲಿ ಮಹತ್ತರವಾದ ಕ್ರಾಂತಿಯನ್ನೇ ಮಾಡಿದ್ದಾರೆ. ಅವರ ಶಿಕ್ಷಣನಿಧಿಯಿಂದ ಎಷ್ಟೊಂದು ಬಡ ವಿದ್ಯಾರ್ಥಿಗಳು ವರುಷ ವರುಷವೂ ವಿದ್ಯೆಗಲಿಯುತ್ತಿಲ್ಲ ! ಅವರು ಕರ್ನಾಟಕಕ್ಕೆ ಶಿಕ್ಷಣ ಸಂಜೀವಿನಿಯಂತಿದ್ದಾರೆ. ಆಧುನಿಕ ಶಿಕ್ಷಣದ ಪುನರುಜ್ಜೀನದ ಆದಿ, ಬುನಾದಿಯಂತಿರುವರು ಆ ಲಿಂಗರಾಜರು.
ದುಡಿತದ ಸರ್ವಾರ್ಪಣ : ಲಿಂಗರಾಜರು ಸತ್ಪಾತ್ರ ದಾನದಿಂದ ಕರ್ನಾಟಕದಲ್ಲಿ ವಿದ್ಯಾವಿದ್ಯುತ್ತಿನ ಸಂಚಾರಗೈದಂತೆ ರಾವಬಹದೂರ ಹಳಕಟ್ಟಿಯವರು ತಮ್ಮ ಆಯುಷ್ಯದ ಸರ್ವಾರ್ಪಣದಿಂದ ಲಿಂಗ ನಂತರ ಜೀವನಾಡಿಯಂತಿರುವ ವಚನಶಾಸ್ತ್ರವನ್ನು ಪುನರುಜೀವಿಸಿದ್ದಾರೆ. ಅವರು
ತಮ್ಮಿ ಸರ್ವಾರ್ಪಣದಿಂದ ಯಾವ ಸಂಘ ಸಂಸ್ಥೆ ಮಾಡದಷ್ಟು ಅದ್ಭುತ ಕಾರ್ಯ ಮಾಡಿದ್ದಾರೆ. ಅವರು ೭೦-೮೦ ಮಹತ್ತರವಾದ ಪುಸ್ತಕಗಳನ್ನು ಬೆಳಕಿಗೆ ತಂದುದೇನು ಸಾಮಾನ್ಯವೇ? ಶೂನ್ಯ – ಸಂಪಾದನೆ ಮತ್ತು ಶಿವಾನುಭವ ಶಬ್ದ ಕೋಶ ಗ್ರಂಥಗಳು ಈ ಎಂಬತ್ತು ಹೊತ್ತಿಗೆಗಳಲ್ಲಿ ಹೊಂಗಳಸಗಳಂತಿವೆ.
ಚಿರಂಜೀವಿಗಳು : ಕನ್ನಡಿಗರು ಅದರಲ್ಲೂ ಲಿಂಗವಂತರು ತಮ್ಮ ಪುನರುಜ್ಜೀವನದಂತಿರುವ ಈ ಮಹನೀಯರನ್ನು ಎಂದೆಂದಿಗೂ ಮರೆಯುವಂತಿಲ್ಲ. ಇವರಿಬ್ಬರು ಕರ್ನಾಟಕದ ಎದೆಯಲ್ಲಿ ನಿರಂತರವೂ ಅಚ್ಚಳಿಯದೆ ಉಳಿಯುವ ಚಿರಂಜೀವಿಗಳು, ಶರಣರ ಮಹಾಶರಣರಾದ ಈ ಈರ್ವರಿಗೆ ಇದೋ ಶರಣು ಶರಣು.