ದಾವಣಗೆರೆ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ತಾವಂಶಿ ಗ್ರಾಮದವರಾದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಗುರುಪೀಠದ ಟ್ರಸ್ಟ್ನ ಮುಖಂಡರು ಪದಚ್ಯುತಿಗೊಳಿಸಿದ್ದಾರೆ.
ಮಠದಲ್ಲಿ ಸೋಮವಾರ ನಡೆದ ಸಭೆಯಲ್ಲಿ 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಶ್ರೀಗಳ ಪದಚ್ಯುತಿಗೆ ನಿರ್ಣಯ ಕೈಗೊಂಡಿದ್ದಾರೆ.
ಸ್ವಾಮೀಜಿಗಳನ್ನು ತೆಗೆದು ಹಾಕಲು ಸರ್ವ ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು ಪೀಠಾರೋಹಣದ ಸಂದರ್ಭದಲ್ಲಿ ತಿಳಿಸಿದಂತೆ ಬೆಂಗಳೂರಿನ ಶ್ವಾಸ ಯೋಗ ಪೀಠವನ್ನು ತ್ಯಜಿಸಬೇಕು ಎಂದು ಹಲವು ಬಾರಿ ಗಡುವು ನೀಡಲಾಗಿತ್ತು. ಈ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿದ ಕಾರಣ ಅವರನ್ನು ಪೀಠದಿಂದ ತೆಗೆದುಹಾಕುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಗುರುಪೀಠದ ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು ತಿಳಿಸಿದ್ದಾರೆ.
ಲೆಕ್ಕಕೊಡಿ ಅಭಿಯಾನ
ಮಠದ ಒಳಗೆ ಟ್ರಸ್ಟಿಗಳ ಸಭೆ ನಡೆಯುತ್ತಿದ್ದರೆ, ಹೊರಗಡೆ ಮಠದ ಭಕ್ತರಿಂದ ಲೆಕ್ಕ ಕೊಡಿ ಅಭಿಯಾನ ನಡೆಯಿತು. ಮಠದ ಆವರಣದಲ್ಲಿ ಭಾರಿ ಹೈಡ್ರಾಮ ನಡೆಯಿತು. ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದಲ್ಲಿ ಮಠದ ಭಕ್ತರು ಲೆಕ್ಕ ಕೊಡಿ ಎಂದು ಮಠದ ಟ್ರಸ್ಟಿಗಳನ್ನು ಆಗ್ರಹಿಸಿದರು. ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸ್ವಾಮೀಜಿಯವರು ಶ್ವಾಸ ಯೋಗ ಪೀಠ ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಟ್ರಸ್ಟ್ನ ಸಭೆಗಳಲ್ಲಿ ಈ ಬಗ್ಗೆ ನಿರ್ಧರಿಸಿದಂತೆ ಈಗಾಗಲೇ 6 ಬಾರಿ ಶ್ರೀಗಳಿಗೆ ಈ ಕುರಿತು ತಿಳಿಸಿದ್ದರೂ, ಅವರು ಅಂತಿಮ ನಿರ್ಧಾರ ಕೈಗೊಂಡಿಲ್ಲ. ತಿಂಗಳಲ್ಲಿ ಒಂದೆರಡು ದಿನ ಮಾತ್ರ ಗುರುಪೀಠದಲ್ಲಿರುವ ಅವರು ಬಹುತೇಕ ದಿನ ಬೇರೆಡೆ ಇರುವುದನ್ನು ಒಪ್ಪಲು ಸಾಧ್ಯವಿಲ್ಲ. ಮಠವನ್ನು ಅತಿಥಿಗೃಹ (ಗೆಸ್ಟ್ಹೌಸ್) ಮಾಡಿಕೊಳ್ಳಲು ಬಿಡುವುದಿಲ್ಲ’ ಎಂದು ಕೆಲವು ದಿನಗಳ ಹಿಂದಷ್ಟೇ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಎಚ್ಚರಿಸಿದ್ದರು.


