ಬೆಳಗಾವಿ: ಅಂಚೆಚೀಟಿ ಸಂಗ್ರಹದ ಕಲೆ ಮತ್ತು ಶ್ರೀಮಂತ ಪರಂಪರೆ ಪ್ರೋತ್ಸಾಹಿಸಲು ಬೆಳಗಾವಿ ಅಂಚೆ ಕಚೇರಿ ಮತ್ತು ಫಿಲಾಟೆಲಿ ಮತ್ತು ನ್ಯೂಮಿಸ್ಮ್ಯಾಟಿಕ್ ಗ್ರೂಪ್ ಜಂಟಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಇಕ್ಷುಪೆಕ್ಸ್- ೨೦೨೫’ ಜಿಲ್ಲಾ ಮಟ್ಟದ ಅಂಚೆ ಚೀಟಿ ಸಂಗ್ರಹ ಪ್ರದರ್ಶನದಲ್ಲಿ ನಗರದ ಸೇಂಟ್ ಮೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ.
ಶಾಲೆಯ ಫಿಲಾಟೆಲಿ ಕ್ಲಬ್ ಉಸ್ತುವಾರಿ ಮಹೇಶ್ ಮನವಾಡಿ ಅವರ ಕರ್ನಾಟಕದ ಸೌಂದರ್ಯ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸ ಬಿಂಬಿಸುವ ಅಂಚೆಚೀಟಿಗಳ ‘ಕರ್ನಾಟಕದ ಅದ್ಭುತಗಳು’ ಎಂಬ ಶೀರ್ಷಿಕೆಯ ಪ್ರದರ್ಶನಕ್ಕೆ ಚಿನ್ನದ ಪದಕ ಲಭಿಸಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಸೇಂಟ್ ಮೇರಿ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಅಂಚೆಚೀಟಿ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಮೂರನೇ ಸ್ಥಾನಗಳನ್ನು ಪಡೆದರು. ಈ ಮೂಲಕ ಶಾಲೆಗೆ ೩ ಚಿನ್ನಘಿ, ೩ ಬೆಳ್ಳಿ ಹಾಗೂ ೯ ಕಂಚಿನ ಪದಕಗಳು ಲಭಿಸಿವೆ. ಅಂಚೆ ಚೀಟಿ ಪ್ರದರ್ಶನದ ವೈಯಕ್ತಿಕ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಅಚಲ್ ಪಾವಸ್ಕರ್ (ಚಿನ್ನದ ಪದಕ ಹಾಗೂ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ), ಶ್ರೇಯಾ ಮನವಾಡಿ (ಚಿನ್ನದ ಪದಕ), ಓಂಕಾರ್ ಬಖೇದಿ, ಪರಂ ಚೌಗುಲೆ ಹಾಗೂ ಓಂ ಬಖೇದಿ (ಬೆಳ್ಳಿ ಪದಕ) ಪಡೆದಿದ್ದಾರೆ.