ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಸೋಮವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಚನ್ನಮ್ಮ ಸರ್ಕಲ್ ದಿಂದ ಆರಂಭವಾಗಿ ಕಾಲೇಜು ರಸ್ತೆ, ರಾಮಲಿಂಗಖಿಂಡಗಲ್ಲಿ, ಶನಿ ಮಂದಿರ, ಕಪಿಲೇಶ್ವರ, ಶಿವಾಜಿ ಉದ್ಯಾನ, ಮಾಲಿನಿ ಸಿಟಿ ಮಾರ್ಗವಾಗಿ ಭವ್ಯ ರೋಡ್ ಶೋ ನಡೆಯಲಿದೆ. ಆದ್ದರಿಂದ ಪೊಲೀಸರು ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ರಸ್ತೆಯ ಎರಡು ಬದಿಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿಲ್ಲಿಸಲಾಗಿದೆ. ಇದು ಪ್ರಮುಖವಾಗಿ ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡುವಂತಾಗಿದೆ. ಜೊತೆಗೆ ಸೋಮವಾರದಿಂದ ಹಲವು ಶಾಲಾ-ಕಾಲೇಜುಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮುಂದೇನು ಮಾಡುವುದು ಎಂದು ಚಿಂತೆಗೊಳಗಾಗಿದ್ದಾರೆ.
ಬೆಳಗಾವಿ/ ಶಿವಮೊಗ್ಗ ಪ್ರತಿನಿಧಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಶಿವಮೊಗ್ಗ ಭಾನುವಾರ ಭಾಗಶಃ ಹಾಗೂ ಸೋಮವಾರ ಸಂಪೂರ್ಣ ಬಂದ್ ಪರಿಸ್ಥಿತಿಗೆ ಒಡ್ಡಿಕೊಳ್ಳಲಿದ್ದು, ‘SSLC.’ ಪೂರ್ವ ಸಿದ್ಧತಾ ಪರೀಕ್ಷೆಗೆ ಆಗಮಿಸುವ ಪರೀಕ್ಷಾರ್ಥಿಗಳಿಗೆ ಭದ್ರತೆ ಬಿಸಿ ತಟ್ಟುವ ನಿರೀಕ್ಷಿಸಿದ್ದು, ಈ ಬಗ್ಗೆ ಎರಡೂ ಜಿಲ್ಲಾಡಳಿತಗಳು ಇನ್ನೂ ಯಾವ ಸ್ಪಷ್ಟತೆ ನೀಡಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಮಕ್ಕಳು ಪ್ರಯಾಣಿಸುವ ಕೆಲ ಗ್ರಾಮೀಣ ಹಾಗೂ ನಗರ ಬಸ್ ಸಂಚಾರವನ್ನು ರದ್ದು ಪಡಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ಇದು ಅಲ್ಲಿನ ಪಾಲಕರ ಆತಂಕಕ್ಕೆ ಎಡೆ ಮಾಡಿದೆ. ಪಾಲಕರು ‘ಜನ ಜೀವಾಳ’ ಹಾಗೂ JJ news ಪತ್ರಿಕಾ ಕಚೇರಿಗಳಿಗೆ ಕರೆ ಮಾಡಿ ಜಿಲ್ಲಾಡಳಿತ ಸ್ಪಷ್ಟತೆ ಪಡಿಸುವಂತೆ ಆಗ್ರಹಿಸುತ್ತಿವೆ.
ಮೋದಿ ಕಾರ್ಯಕ್ರಮ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಪಾಲಕರ ಆಗ್ರಹ :ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ಸೋಮವಾರ ಶಿವಮೊಗ್ಗ , ಬೆಳಗಾವಿಗೆ ಆಗಮಿಸಲಿದ್ದಾರೆ. ಭವ್ಯ ರೋಡ್ ಶೋ ನಡೆಸಲಿದ್ದು ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ ಏರ್ಪಡಿಸಿದೆ. ಆದರೆ ಇದೀಗ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮತ್ತು ಅವರ ಪಾಲಕರಲ್ಲಿ ಕೆಲ ಗೊಂದಲ ಮೂಡಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸೋಮವಾರ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತೆ ಪರೀಕ್ಷೆಯ ರಾಜ್ಯಮಟ್ಟದ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2:00 ವರೆಗೆ ಪರೀಕ್ಷೆ ನಡೆಯುತ್ತದೆ. ಬೆಳಗಾವಿ ಪೊಲೀಸರು ಈಗಾಗಲೇ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಇದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಆತಂಕಕ್ಕೊಳಗಾಗಿದ್ದಾರೆ. ತಮ್ಮ ಮಕ್ಕಳನ್ನು ಶಾಲಾ-ಕಾಲೇಜಿಗೆ ಹೇಗೆ ಕಳಿಸುವುದು ಎನ್ನುವುದು ಪಾಲಕರ ಪ್ರಶ್ನೆಯಾಗಿದೆ.
ಪ್ರತಿಕ್ರಿಯೆ : ರಾಜ್ಯ ಪ್ರೌಢಶಾಲೆ ಸಂಘದ ಪ್ರಧಾನ ಕಾರ್ಯದರ್ಶಿ ಗುಗವಾಡ ಅವರು ದೇಶದ ಗೌರವಾನ್ವಿತ ಪ್ರಧಾನಿಯವರನ್ನು ಬೆಳಗಾವಿ ಜನತೆ ಸ್ವಾಗತಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಲವು ಪರೀಕ್ಷೆಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಶಾಲಾ-ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಹೇಗೆ ಕಳುಹಿಸುವುದು ಎಂಬ ಸಂದೇಹ ಎದುರಾಗಿದೆ. ಜಿಲ್ಲಾಡಳಿತ ಗೊಂದಲ ನಿವಾರಣೆ ಮಾಡಬೇಕು. ಸಾಧ್ಯವಾದರೆ ಪ್ರಧಾನಿ ಆಗಮಿಸುವ ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.