ಅಥಣಿ :
ನನ್ನ ಮೇಲಿನ ಅದಮ್ಯ ವಿಶ್ವಾಸ, ಪ್ರೀತಿ, ನಂಬಿಕೆಯಿಂದ 1,31,404 ಮತಗಳನ್ನು ನೀಡಿ ರಾಜ್ಯದಲ್ಲಿಯೇ
ಹೆಚ್ಚು ಮತಗಳ ಅಂತರದಿಂದ ಗೆದ್ದವರಲ್ಲಿ 3ನೇ ಸ್ಥಾನ ನೀಡಿದ ಅಥಣಿ ಮತಕ್ಷೇತ್ರದ ಸಮಸ್ತ ಮತದಾರ ಬಾಂಧವರೆಲ್ಲರ ಋಣ ತೀರಿಸುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಮುಂದಿನ 2028ರ ವಿಧಾನಸಭೆ ಚುನಾವಣೆ ವೇಳೆ ತಮ್ಮೆಲ್ಲರ ಮನಸ್ಸು ಗೆಲ್ಲುವ ಕಾರ್ಯಗಳನ್ನು ಮಾಡಿ, 2023ರಲ್ಲಿ ಲಕ್ಷ್ಮಣ ಸವದಿಯವರನ್ನು ಗೆಲ್ಲಿಸಿದ್ದಕ್ಕೆ ಸಾರ್ಥಕವಾಯಿತು ಎಂದು ನೀವು ಎನ್ನುವಂತೆ ಅಥಣಿ ಮತಕ್ಷೇತ್ರದ ಅಭಿವೃದ್ಧಿ ಹಾಗೂ ಪ್ರಾಮಾಣಿಕವಾಗಿ ತಮ್ಮೆಲ್ಲರ ಸೇವೆ ಮಾಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿಗಳು , ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ದಿ. 15-06-2023 ರಂದು ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಯಕ್ಕಂಚಿ ಗ್ರಾಮದಲ್ಲಿ ಮತದಾನವಾದ ಒಟ್ಟು 1750 ಮತಗಳಲ್ಲಿ 1460 ಮತಗಳನ್ನು ನನಗೆ ನೀಡಿ ಇಡೀ ಗ್ರಾಮವು ನನ್ನ ಬೆನ್ನಿಗೆ ನಿಂತು ಆಶೀರ್ವದಿಸಿದೆ. ಗ್ರಾಮಸ್ಥರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಗ್ರಾಮಸ್ಥರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗಾಗಿ, ಸಮಸ್ಯೆಗಳಿದ್ದಲ್ಲಿ ನೇರವಾಗಿ ನನಗೆ ಕರೆ ಮಾಡಿ ಅಥವಾ ನಮ್ಮ ಮನೆಗೆ ಭೇಟಿ ನೀಡಿ ತಿಳಿಸಿದರೆ, ನಾನು ಸದಾ ತಮ್ಮ ಸೇವೆಗೆ ಸಿದ್ಧನಿದ್ದೇನೆ. ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರೊಂದಿಗೆ, ರೈತರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಲು ತಿಳಿಸಿದ್ದೇನೆ. ಭ್ರಷ್ಟ ಅಧಿಕಾರಿಗಳಿಗೆ ಇನ್ನು ತಾಲೂಕಿನಲ್ಲಿ ಉಳಿಗಾಲವಿಲ್ಲ. ಯಾರೇ ನಿಮ್ಮ ನ್ಯಾಯಯುತ ಕೆಲಸ ಕಾರ್ಯಗಳಿಗೆ ಹಣದ ಬೇಡಿಕೆ ಇಟ್ಟರೆ ತಕ್ಷಣವೇ ಅಂಥವರಿಗೆ ಶಾಸಕ ಲಕ್ಷ್ಮಣ ಸವದಿಯವರಿಗೆ ತಿಳಿಸುತ್ತೇವೆ ಎಂದು ಹೇಳಬೇಕು. ಅಂಥವರ ಬಗ್ಗೆ ನನ್ನ ಗಮನಕ್ಕೆ ತಂದರೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಇನ್ನು ಒಂದು ವರ್ಷದ ಒಳಗಾಗಿ ಹಲವಾರು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿ ಅಥಣಿ ಮತಕ್ಷೇತ್ರದ ಶೇ.99 ರಷ್ಟು ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಕೃಷ್ಣಾ ನದಿಯಲ್ಲಿ ಮಳೆಯ ಅಭಾವದಿಂದ ನೀರಿನ ಕೊರತೆಯುಂಟಾಗಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ನದಿಗೆ ನೀರು ಬಂದ ಬಳಿಕ ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದರು.
ಮಲ್ಲಯ್ಯಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಶಿಂಗೆ, ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ವಕೀಲ) ಶ್ರೀಕಾಂತ ಪೂಜಾರಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು, ಮಾತೆಯರು ಪಾಲ್ಗೊಂಡಿದ್ದರು.