ಮಂಗಳೂರು :
ನಮ್ಮ ಆಯ್ಕೆ ವಿಷಯ ಉದ್ಯೋಗಕ್ಕೆ ಕಾರಣವಲ್ಲ. ನಮ್ಮ ತಜ್ಞತೆ, ಕೌಶಲಗಳು ಉದ್ಯೋಗಕ್ಕೆ ಪೂರಕ. ಸಾಮರ್ಥ್ಯವಿದ್ದರೆ ಮಾತ್ರ ಅವಕಾಶಗಳು ಬಾಗಿಲು ತೆರೆಯುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅಭಿಪ್ರಾಯ ಪಟ್ಟರು. ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾ ಭವನದಲ್ಲಿ ಗುರುವಾರ ಐಕ್ಯೂಎಸಿ, ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾಸರಗೋಡು ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ್ ಪದ್ಯಾಣ ಮಾತನಾಡಿ, ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ ಮತ್ತು ಘನತೆ ಇದೆ. ಅವಕಾಶಗಳು ಇವೆ. ಐಚ್ಛಿಕ ಕನ್ನಡ ಎಂಬುದು ಕೇವಲವಲ್ಲ. ಈ ವಿಷಯಕ್ಕೂ ಅಗಾಧ ಅವಕಾಶಗಳಿವೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಪದವಿ ಆನಂತರ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳಿರುವ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ.ಅನಸೂಯಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮಾಧವ ಎಂ.ಕೆ. ಸ್ವಾಗತಿಸಿದರು. ಸಂಯೋಜಕ ಮಧು ಬಿರಾದಾರ್ ವಂದಿಸಿದರು. ವಿಧಿಶ್ರೀ ನಿರೂಪಿಸಿದರು.