ಜನ ಜೀವಾಳ ಸರ್ಚ್ ಲೈಟ್ :ಪುರುಷರಿಗೆ ಕನ್ನಡಕ ಹಾಕಿಸಿ ಸೆರಗು ಹೊದಿಸಿ ವಿಧವಾ ವೇತನ, ಪಿಂಚಣಿ ವಸೂಲಿ..!; ಇದು ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ ನೂತನವಾಗಿದೆ.
ಜಿಲ್ಲಾಧಿಕಾರಿಗಳೇ ಇಂತಹ ಬೊಗಸ್ ಬಾಬುಗಳನ್ನು ಬೆಂಡೆತ್ತಿ ಎಂಬ ಬಲವಾದ ಆಗ್ರಹ ಇದೀಗ ಜನತೆಯಿಂದ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆಯ ಅದರಲ್ಲೂ ಬೆಳಗಾವಿ ನಗರಕ್ಕೆ ಹೊಂದಿಕೊಂಡ ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಇದೀಗ ಇಂತಹ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡಲು ಆರಂಭವಾಗಿದೆ. 30-35 ವರ್ಷದ ಪುರುಷರು ಹಾಗೂ ಮಹಿಳೆಯರಿಗೆ ಕನ್ನಡಕ ಹಾಕಿಸಿ ಸೀರೆ ಉಡಿಸಿ 60 ವರ್ಷ ಮೀರಿದ ವಯೋವೃದ್ದೆಯರಂತೆ ವೇಷ ಹಾಕಲಾಗುತ್ತಿದೆ. ಅವರಿಗೆ ಪಿಂಚಣಿ, ವೃದ್ದಾಪ್ಯ ಹಾಗೂ ವಿಧವಾ ವೇತನ ಸೇರಿದಂತೆ ಹಲವು ವೇತನಗಳನ್ನು ಪಡೆಯುವ ದಂಧೆಗಳನ್ನು ಈ ಮೂಲಕ ಪರಿಚಯಿಸುತ್ತಿರುವ ಏಜೆಂಟರ ಹಾವಳಿಯಂತೂ ಹೇಳತೀರದಾಗಿದೆ.
ಈ ಮೂಲಕ ಕಮಿಷನ್ ಪಡೆಯುತ್ತಿರುವ ದಂಧೆ ಜನಸಾಮಾನ್ಯರಿಗೆ ಅದರಲ್ಲೂ ಪ್ರಜ್ಞಾವಂತ ಜನರಿಗೆ ಅಸಹ್ಯ ಹುಟ್ಟಿಸುವಂತಾಗಿದೆ. ಸರಕಾರದ ಹಣ ಪಡೆಯಲು ಜನ ಯಾವ ಯಾವ ವಾಮಮಾರ್ಗಗಳನ್ನು ಅನುಸರಿಸುತ್ತಾರೆ ಎಂಬ ಚರ್ಚೆ ಜೋರಾಗಿದೆ.
ಇಂತಹ ನಕಲಿ ವಯೋವೃದ್ದರಿಗೆ ವೇಷ ಹಾಕಿಸಲು ಏಜೆಂಟರು ಸೃಷ್ಟಿಯಾಗಿದ್ದಾರೆ. ಪ್ರತಿ ಏಜೆಂಟರು ಕನಿಷ್ಠಪಕ್ಷ ₹ 7,000 ಪಡೆಯುತ್ತಾರೆ. ಎಷ್ಟು ದಿನ ಹಣ ಬರುತ್ತದೆ ಅಷ್ಟನ್ನು ಪಡೆದುಕೊಳ್ಳಿ ಎಂದು ಸಬೂಬನ್ನು ಹೇಳುತ್ತಾರೆ. ಒಂದೊಂದು ಮನೆಯಲ್ಲಿ ಕನಿಷ್ಠ ಇಬ್ಬರು ಪಿಂಚಣಿ ಹಾಗೂ ವಿಧವ ವೇತನ ಪಡೆಯುತ್ತಿರುವುದು ಈಗ ಕಂಡು ಬಂದಿದೆ.
ಬೆಳಗಾವಿ ಜಿಲ್ಲೆಯ ಹಳ್ಳಿಗಳಲ್ಲಿ ಇಂತಹ ಚಟುವಟಿಕೆ ಮೇರೆ ಮೀರಿದ್ದು ಅತ್ಯಂತ ವಿಪರೀತ ಎನಿಸುವಷ್ಟು ಈ ದಂಧೆ ನಡೆಯುತ್ತಿದೆ.